Advertisement

ಬಯೋಮೆಟ್ರಿಕ್‌ ಆಯ್ತು, ರೆಟಿನಾ ಹಾಜರಾತಿಗೆ ಪಾಲಿಕೆ ನಿರ್ಧಾರ

12:17 PM Nov 21, 2017 | Team Udayavani |

ಬೆಂಗಳೂರು: ಗುತ್ತಿಗೆ ಪೌರಕಾರ್ಮಿಕರ ಹಾಜರಾತಿಗಾಗಿ ಮೊದಲ ಬಾರಿಗೆ ಬಯೋ ಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿರುವ ಬಿಬಿಎಂಪಿ, ಇದೀಗ ಕಣ್ಣಿನ ರೆಟಿನಾ ಮೂಲಕ ಹಾಜರಾತಿ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.

Advertisement

ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರ ನಿಖರ ಮಾಹಿತಿಗಾಗಿ ಬಯೋ ಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಕೆಲವು ಕಡೆಗಳಲ್ಲಿ ಪೌರಕಾರ್ಮಿಕರ ಬೆರಳಚ್ಚು ಬಯೋ ಮೆಟ್ರಿಕ್‌ ಯಂತ್ರ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಪಾಲಿಕೆಯ ಅಧಿಕಾರಿಗಳು ಅಂತಹವರ ಹಾಜರಾತಿ ಕಣ್ಣಿನ ರೆಟಿನಾ ಮೂಲಕ ಪಡೆಯುವ ವ್ಯವಸ್ಥೆ ತರಲು ನಿರ್ಧರಿಸಿದ್ದಾರೆ. 

ಪಾಲಿಕೆಯಲ್ಲಿರುವ ಗುತ್ತಿಗೆ ಪೌರಕಾರ್ಮಿಕರ ನಿಖರ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಹೇಳಿದಷ್ಟು ಜನರಿಗೆ ವೇತನ ನೀಡಲಾಗುತ್ತಿತ್ತು. ಆದರೆ, ವಿವಿಧ ಸ್ವಯಂ ಸೇವಕ ಸಂಘಟನೆಗಳು ಹಾಗೂ ವಿರೋಧ ಪಕ್ಷದವರು ಪೌರಕಾರ್ಮಿಕರ ಹೆಸರಿನಲ್ಲಿ ಗುತ್ತಿಗೆದಾರರು ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ವಾರ್ಡ್‌ಗಳಿಂದ ಪೌರಕಾರ್ಮಿಕರ ಪಟ್ಟಿ ಪಡೆದು ಪರಿಶೀಲಿಸಿದಾಗ ಆರೋಪಗಳಿಗೆ ಪುಷ್ಟಿ ನೀಡುವ ಹಲವಾರು ಅಂಶಗಳು ಕಂಡುಬಂದಿದ್ದವು. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಬಯೋ ಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದ್ದಾರೆ. 

ಕೆಲವೊಂದು ವಾರ್ಡ್‌ಗಳಲ್ಲಿ ಹಿರಿಯ ಪೌರಕಾರ್ಮಿಕರ ಬೆರಳಚ್ಚುಗಳನ್ನು ಬಯೋ ಮೆಟ್ರಿಕ್‌ ಯಂತ್ರ ಪಡೆದುಕೊಳ್ಳುತ್ತಿಲ್ಲ ಎಂಬ ಉದ್ದೇಶದಿಂದ ಅಂತಹವರ ಹಾಜರಾತಿಯನ್ನು ಸಹಿ ಮೂಲಕ ಪಡೆಯುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಅದನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿರುವ ಕೆಲ ಗುತ್ತಿಗೆದಾರರು ತಮ್ಮ ಬಳಿ ಕೆಲಸ ಮಾಡುವ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ವೃದ್ಧರಾಗಿದ್ದಾರೆ ಎಂದೇಳಿ ಬಯೋಮೆಟ್ರಿಕ್‌ ಯಂತ್ರದ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 

Advertisement

ಬಯೋ ಮೆಟ್ರಿಕ್‌, ರೆಟಿನಾ ಎರಡೂ ವ್ಯವಸ್ಥೆ ಬಳಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ನೇರವಾಗಿ ಅವರ ಖಾತೆ ಜಮೆ ಮಾಡುವ ಉದ್ದೇಶದಿಂದ ಬಯೋ ಮೆಟ್ರಿಕ್‌ ಹಾಜರಾತಿ ಪಡೆಯಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕಾರ್ಮಿಕರ ಹಾಜರಾತಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಹಾಗಾಗಿ ಪಾಲಿಕೆಯ ಎಲ್ಲ ಮಸ್ಟರಿಂಗ್‌ ಕೇಂದ್ರಗಳಿಗೂ ಮುಂದಿನ ದಿನಗಳಲ್ಲಿ ಬಯೋ ಮೆಟ್ರಿಕ್‌ ಹಾಗೂ ರೆಟಿನಾ ಯಂತ್ರಗಳ ಮೂಲಕ ಹಾಜರಾತಿ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಒಂದೊಮ್ಮೆ ಬಯೋ ಮೆಟ್ರಿಕ್‌ ಮೂಲಕ ಹಾಜರಾತಿ ಸಾಧ್ಯವಾಗದಿದ್ದರೆ, ರೆಟಿನಾ ಮೂಲಕ ಹಾಜರಾತಿ ಪಡೆಯಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

2 ತಿಂಗಳಿನಿಂದ ವೇತನವಿಲ್ಲ: ಗುತ್ತಿಗೆ ಪೌರಕಾರ್ಮಿಕರ ಬ್ಯಾಂಕ್‌ ಖಾತೆಗೆ ನೇರವಾಗಿ ವೇತನ ಜಾರಿಗೊಳಿಸಲು ಬಯೋ ಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಕಳೆದ ಎರಡು ತಿಂಗಳಿಂದ ಕಾರ್ಮಿಕರಿಗೆ ಪಾಲಿಕೆಯಿಂದ ವೇತನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಪೌರಕಾರ್ಮಿಕರು ಸಮಸ್ಯೆ ಅನುಭವಿಸುವಂತಾಗಿದ್ದು, ಶೀಘ್ರ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಪೌರಕಾರ್ಮಿಕರ ಮಾಹಿತಿ ಹಾಗೂ ಹಾಜರಾತಿಯನ್ನು ಕಲೆ ಹಾಕುತ್ತಿರುವುದರಿಂದ ವೇತನ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃದ್ಧ ಗುತ್ತಿಗೆಪೌರಕಾರ್ಮಿಕರು ಬೆರಳಚ್ಚುಗಳನ್ನು ಬಯೋ ಮೆಟ್ರಿಕ್‌ ಯಂತ್ರ ತೆಗೆದುಕೊಳ್ಳುತ್ತಿಲ್ಲ. ಆ ಹಿನ್ನೆಲೆಯಲ್ಲಿ ರೆಟಿನಾ ಮೂಲಕ ಹಾಜರಾತಿ ಪಡೆಯುವ ವ್ಯವಸ್ಥೆ ತರಲು ತೀರ್ಮಾನಿಸಲಾಗಿದೆ. 
-ಆರ್‌. ಸಂಪತ್‌ರಾಜ್‌, ಮೇಯರ್‌

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next