ಕಲಬುರಗಿ: ಭಗವಾನ್ ಮಹಾವೀರ ಜಯಂತಿಯನ್ನು ಏ.9ರಂದು ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಅಂದು ಸಂಜೆ 7:30 ಗಂಟೆಗೆ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾಗಿ ಸಚಿವರಿಂದ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಮಾರಂಭಕ್ಕೆ ಚಾಲನೆ ನೀಡಲು ಸಭೆ ನಿರ್ಣಯ ಕೈಗೊಂಡಿತು. ಸಮಾರಂಭದ ಅಂಗವಾಗಿ ಮಹಾವೀರರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಜಯಂತಿ ಆಚರಣೆ ಅಂಗವಾಗಿ ಭಗವಾನ್ ಮಹಾವೀರರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಗ್ಗೆ 7:00 ಗಂಟೆಗೆ ಚೌಕ್ ಪೊಲೀಸ್ ಠಾಣೆಯಿಂದ ಸೂಪರ್ ಮಾರ್ಕೇಟ್, ಗಾಜೀಪುರ, ಮಹಾವೀರ ಚೌಕ್ ಮೂಲಕ ಸರಾಫ್ ಬಜಾರ್‌ನಲ್ಲಿರುವ ದಿಗಂಬರ ಜೈನ್ ಮಂದಿರವರೆಗೆ ಸಮಾಜದಿಂದ ಆಯೋಜಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಯಂತಿ ದಿನದಂದು ಸಾರ್ವಜನಿಕ ಸ್ಥಳದಲ್ಲಿ ಮಾಂಸ ಮಾರಾಟ ಮಾಡದಂತೆ ನಿಷೇಧ ಹೇರಲು ತೀರ್ಮಾನಿಸಲಾಯಿತು. ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಕಲಾ ತಂಡಗಳ ಪಾಲ್ಗೊಳ್ಳುವಿಕೆ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್, ಮಹಾವೀರ ವೃತ್ತಕ್ಕೆ ದೀಪಾಲಂಕಾರ, ಜೈನ ಮಂದಿರ ಸುತ್ತಮುತ್ತ ಸ್ವತ್ಛತೆ ಮುಂತಾದವುಗಳ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಸೂಚಿಸಲಾಯಿತು.
ವಿವಿಧ ಇಲಾಖೆ ಅಧಿಕಾರಿಗಳು, ಶ್ರೀ ದಿಗಂಬರ ಜೈನ ಮಂದಿರದ ಅಧ್ಯಕ್ಷ ಚಂದ್ರಮೋಹನ ಶಹಾ, ಜೈನ ಸೋಷಿಯಲ್ ಗ್ರೂಪ್ ಅಧ್ಯಕ್ಷ ಡಾ| ಶ್ರೇಯಸ್ ಕೋಠಾರಿ, ಜೈನ ಶ್ವೇತಾಂಬರ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ ಸಿಂಘಿ, ಆದಿನಾಥ ದಿಗಂಬರ ಮಂದಿರದ ಅಧ್ಯಕ್ಷ ನಾಗನಾಥ ಚಿಂದೆ ಹಾಗೂ ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಜಯಂತಿ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.