Advertisement
ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರು ನಾಪತ್ತೆಯಾಗಿ 88 ದಿನಗಳು ಕಳೆದಿವೆ. ಜನಪ್ರತಿನಿಧಿಗಳು ಮೀನುಗಾರರ ಮನೆಗೆ ಭೇಟಿ ನೀಡಿದ್ದು ಬಿಟ್ಟರೆ, ಏನಾಗಿದೆ ಎಂದು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಪೊಲೀಸರ ತಂಡ, ಕೋಸ್ಟ್‌ಗಾರ್ಡ್, ನೌಕಾಪಡೆಯು ಆರಂಭದ ಎರಡು ತಿಂಗಳಿನಿಂದ ಶೋಧ ಕಾರ್ಯ ನಡೆಸಿದರೂ ಒಂದೇ ಒಂದು ಸುಳಿವು ಲಭ್ಯವಾಗದೆ ಈಗ ಕೈಚೆಲ್ಲಿ ಕುಳಿತಿವೆ. ಪ್ರಕರಣದ ನಿಗೂಢತೆಯನ್ನು ಭೇದಿಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೊರೆ ಹೋಗಲಾಗಿದೆ. ಎರಡು ವಾರದ ಹಿಂದೆ ಮೀನುಗಾರ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾಗಿ ಪತ್ತೆಗೆ ಸಹಾಯ ಕೋರಿದ್ದಾರೆ. ಅತೀ ಶೀಘ್ರ ನೌಕಾದಳ ಅಧಿಕಾರಿಗಳೊಂದಿಗೆ ಮಲ್ಪೆಗೆ ಬಂದು ಚರ್ಚಿಸಿ ಕಾರ್ಯಾಚರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ಸಚಿವರು ನೀಡಿರುವ ಹಿನ್ನೆಲೆಯಲ್ಲಿ ಈಗ ಮನೆಯವರು ರಕ್ಷಣಾ ಸಚಿವರ ಬರುವಿಕೆಯ ನಿರೀಕ್ಷೆಯಲ್ಲಿಯೂ ಇದ್ದಾರೆ. ಮನೆಯಲ್ಲಿ ಈಗಲೂ ಕಣ್ಣೀರು
ನಾಪತ್ತೆಯಾದ ಮೀನುಗಾರ ಚಂದ್ರಶೇಖರ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಅವರ ಮನೆಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ನೆನೆದು ಈಗಲೂ ಕಣ್ಣೀರಿಡುತ್ತಿದ್ದಾರೆ. ತಮ್ಮವರ ಗತಿ ಏನಾಗಿದೆ ಎಂಬ ಮಾಹಿತಿ ಸಿಗದೆ ಕುಟುಂಬಗಳು ಅಸಹಾಯಕರಾಗಿ ಹತಾಶೆಯ ಸ್ಥಿತಿ ಅನುಭವಿ ಸುತ್ತಿದ್ದು, ಬರುವಿಕೆಗಾಗಿ ಇನ್ನೂ ಕಾಯುತ್ತಾ ಕುಳಿತಿದ್ದಾರೆ.