ಹುಬ್ಬಳ್ಳಿ: “ಮೈತ್ರಿಪಕ್ಷಗಳ ಮುಖಂಡರಿಂದ ವ್ಯಕ್ತವಾಗುತ್ತಿರುವ ಹೇಳಿಕೆ, ಗೊಂದಲಮಯ ವಾತಾವರಣಕ್ಕೆ ಎರಡೂ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬೇರೆಯವರ ಮಾತುಗಳು ಲೆಕ್ಕಕ್ಕೆ ಬರುವುದಿಲ್ಲ’ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, “ಯಾರ್ಯಾರೋ ಹೇಳಿಕೆ ನೀಡಿದರೆ ಅವುಗಳಿಗೆ ಗಮನ ನೀಡುವ ಅಗತ್ಯವಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೈಗೊಳ್ಳುವ ತೀರ್ಮಾನ,
ನೀಡುವ ಹೇಳಿಕೆಗಳೇ ಮುಖ್ಯ ಹೊರತು ಇನ್ನಿತರರ ಹೇಳಿಕೆಗಳು ಪ್ರಮುಖ ಅಲ್ಲ’ ಎಂದರು. ಸಮ್ಮಿಶ್ರ ಸರ್ಕಾರ ಕುರಿತಾಗಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳು ಪ್ರಮುಖವಾಗುತ್ತವೆ. ಉಳಿದವರ ಮಾತುಗಳು ಗೌಣ ಎಂದರು.
ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಅದರಲ್ಲಿ ಯಾವುದೇ ಅನುಮಾನ ಬೇಡ. ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಅವರು ಮಂಗಳವಾರ ಆಗಮಿಸಲಿದ್ದು, ನಾವೆಲ್ಲರೂ ಸೇರಿ ಪ್ರಚಾರ ಮಾಡುತ್ತೇವೆ.
ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಸದ್ಯಕ್ಕೆ ನಮ್ಮ ಮುಂದಿರುವುದು ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು, ಅದನ್ನು ಮಾಡುತ್ತೇವೆ. ನಂತರ 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂಬ ಬಗ್ಗೆ ಯೋಚಿಸುತ್ತೇವೆ ಎಂದರು.