Advertisement

ಕಾರ್ಕಳ ಒಳಚರಂಡಿ ವ್ಯವಸ್ಥೆ ಮುಖ್ಯಮಂತ್ರಿ ಸಭೆಯಲ್ಲಿ ನಿರ್ಧಾರ

03:45 AM Feb 09, 2017 | |

ವಿಧಾನಸಭೆ: ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟಣದಲ್ಲಿ ಅಸಮರ್ಪಕವಾಗಿರುವ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಹೇಳಿದ್ದಾರೆ.

Advertisement

ಬುಧವಾರ ಬಿಜೆಪಿ ಸದಸ್ಯ ಸುನೀಲ್‌ ಕುಮಾರ್‌ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, 1981ರಲ್ಲಿ ಕಾರ್ಕಳ ಪಟ್ಟಣಕ್ಕೆ 2.95 ಎಂ.ಎಲ್‌.ಡಿ. ಶುದ್ಧೀಕರಣಗಾರದೊಂದಿಗೆ ಒಲಚರಂಡಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಪ್ರಸ್ತುತ ಸಾಕಷ್ಟು ನಗರ-ಪಟ್ಟಣಗಳಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿದ್ದರೂ ಹಣದ ಕೊರತೆ ಇರುವುದರಿಂದ ಮುಂದಿನ ಎರಡು ಆರ್ಥಿಕ ವರ್ಷದಲ್ಲಿ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ನಿರ್ದೇಶನ ನೀಡಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುನೀಲ್‌ ಕುಮಾರ್‌, 1981ರಲ್ಲಿ ಕಾರ್ಕಳದ ಆಗಿನ ಜನಸಂಖ್ಯೆಗೆ ಅನುಗುಣವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ 36 ವರ್ಷ ಕಳೆದರೂ ಒಳಚರಂಡಿ ವ್ಯವಸ್ಥೆ ಸುಧಾರಣೆ ಮಾಡಿಲ್ಲ ಎಂದಾದರೆ ಆ ನಗರ ಅಥವಾ ಪಟ್ಟಣದ ಪರಿಸ್ಥಿತಿ ಏನಾಗಬೇಡ. ಆದ್ದರಿಂದ ಕೂಡಲೇ ಕಾರ್ಕಳದಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಕಾರ್ಕಳ ಸೇರಿದಂತೆ ಅನೇಕ ಪಟ್ಟಣ ಮತ್ತು ನಗರಗಳಿಂದ ಒಳಚರಂಡಿ ಕಾಮಗಾರಿಗಳಿಗೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶುಕ್ರವಾರ ಸಭೆ ನಡೆಸಲಾಗುತ್ತಿದ್ದು, ಈ ಸಭೆಯಲ್ಲಿ ಕಾರ್ಕಳ ಪಟ್ಟಣದ ಬಗ್ಗೆಯೂ ಪ್ರಸ್ತಾಪಿಸಿ ಆದಷ್ಟು ಬೇಗ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next