ಸೇಡಂ : ದಿನೇದಿನೇ ಕೊರೊನಾ ಸಾವಿನ ಪ್ರಕರಣ ಹೆಚ್ಚಳ ಮತ್ತು ಆತಂಕದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ವಯಂ ಲಾಕ್ ಡೌನ್ ಗೆ ಸಂಘ-ಸಂಸ್ಥೆಗಳು ನಿರ್ಧರಿಸಿವೆ. ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ದಲ್ಲಿ ಸ್ಥಳೀಯ ಸ್ವಾಮೀಜಿಗಳ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಘ, ಸಂಸ್ಥೆಗಳ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಬೆಡ್ ಮತ್ತು ಆಕ್ಸಿಜನ್ ಕೊರತೆ ತಲೆದೋರಿದ್ದು, ಸರಿಯಾದ ಚಿಕಿತ್ಸೆ ಸಿಗದೆ ಯುವ ಸಮೂಹ ಕೊರೊನಾಕ್ಕೆ ಬಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಬಂಧಕ್ಕೆ ಮುಂದಾಗ ಲಾಗಿದೆ. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ಮಾತನಾಡಿ, ವಿದ್ಯಾವಂತರಿಂದಲೇ ಕೊರೊನಾ ಹರಡುವಿಕೆ ಜಾಸ್ತಿ ಯಾಗಿದೆ. ಅಪಪ್ರಚಾರ ಮಾಡುವವರಿಗೆ ಕಡಿವಾಣ ಹಾಕಬೇಕು. ಕಲ್ಯಾಣ ಮಂಟಪ ಬುಕ್ ಮಾಡುವವರು ತಹಶೀಲ್ದಾರ್ ಅನುಮತಿ ಕಡ್ಡಾಯವಾಗಿದೆ. ಕೋಣೆಗಳ ಅವಶ್ಯಕತೆ ಇದ್ದಲ್ಲಿ ಶಾಲೆಯನ್ನು ಬಿಟ್ಟು ಕೊಡಲು ಸಂಸ್ಥೆ ಸಿದ್ಧವಿದೆ ಎಂದು ಹೇಳಿದರು.
ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಭಕ್ತರನ್ನು ದೂರವಾಣಿಯಲ್ಲೇ ವಿಚಾರಿಸಿ, ತಿಥಿ ಪಂಚಾಂಗ ತಿಳಿಸುತ್ತಿದ್ದೇನೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು. ಹಿರಿಯ ವೈದ್ಯ ಡಾ| ಉದಯಕುಮಾರ ಶಹಾ ಮಾತನಾಡಿ, ಕೊರೊನಾ ಪ್ರಕರಣ ಕಡಿಮೆಯಾಗಬೇಕಾದಲ್ಲಿ ಲಾಕ್‌ಡೌನ್ ಅವಶ್ಯಕ. ವ್ಯಾಕ್ಸಿನ್ ಗಿಂತಲೂ ಮಾಸ್ಕ್ ಅವಶ್ಯಕ ಎಂದರು.
ನಿಸರ್ಗ ಆಸ್ಪತ್ರೆ ನಿರ್ದೇಶಕ ಡಾ| ಶ್ರೀನಿವಾಸ ಮೊಕದಮ್ ಮಾತನಾಡಿ, ದಿನಕ್ಕೆ ಲಕ್ಷ ರೂ. ನೀಡಿದರೂ ರಾಜ್ಯ ಸೇರಿದಂತೆ ಗಡಿಯ ತೆಲಂಗಾಣ, ಮಹಾರಾಷ್ಟ್ರದಲ್ಲೂ ಬೆಡ್ ಸಿಗ್ತಿಲ್ಲ. ಕೊರೊನಾ ಮಹಾಮಾರಿ ಗಾಳಿಯಲ್ಲಿ ಸೇರಿಕೊಂಡಿದೆ. ಹೀಗಾಗಿ ಹಳ್ಳಿಲಿದ್ದರೂ, ದಿಲ್ಲಿಲಿದ್ದರೂ ಬರುತ್ತದೆ ಎಂದು ಹೇಳಿದರು. ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ರೇವಗೊಂಡ, ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ಕಿರಾಣಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮನೋಹರ ದೊಂತಾ, ಪುರಸಭೆ ಉಪಾಧ್ಯಕ್ಷ ಶಿವಾನಂದಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಸತೀಶ ಪಾಟೀಲ ತರ್ನಳ್ಳಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ, ಡಾ| ರಾಜಕುಮಾರ ಬಿರಾದಾರ, ಡಾ| ಮೋಹನರೆಡ್ಡಿ ರುದ್ರವಾರ ಮಾತನಾಡಿದರು. ಸ್ವಯಂ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಮಾರುಕಟ್ಟೆಯ ಸಮಯ ನಿಗದಿ ಕುರಿತು ಬುಧವಾರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಪತ್ರಕರ್ತ ಶಿವಕುಮಾರ ನಿಡಗುಂದಾ ನಿರೂಪಿಸಿದರು. ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ವಂದಿಸಿದರು. ಅಖೀಲ ಭಾರತ ವೀಶೈವ ಮಹಾಸಭಾ, ವಕೀಲರ ಸಂಘ, ಖಾಸಗಿ ವೈದ್ಯರ ಸಂಘ, ಮರಾಠಾ ಸಂಘ, ವ್ಯಾಪಾರಿಗಳ ಸಂಘ, ವರ್ತರಕರ ಸಂಘ, ಸರ್ಕಾರಿ ನೌಕರರ ಸಂಘ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಪುರಸಭೆ ಉಪಾಧ್ಯಕ್ಷ ಶಿವಾನಂದ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವರದಾಸ್ವಾಮಿ ಹಿರೇಮಠ, ಬಂಜಾರಾ ಸಮಾಜದ ಉಪಾಧ್ಯಕ್ಷ ಅಶೋಕ ಪವಾರ, ಮುಖಂಡ ವೆಂಕಟೇಶ ಪಾಟೀಲ, ಸಂತೊಷ ಮಹಾರಾಜ, ಡಾ| ಲಗಶೆಟ್ಟಿ ಇವಣಿ, ಅಜಯ ಊಡಗಿ, ಲಾಲು ರಾಠೊಡ, ನಿತೀನ್ ಅಂಬುರೆ, ಚಂದ್ರಶೆಟ್ಟಿ ಬಂಗಾರ, ಜನಾರ್ಧನರೆಡ್ಡಿ ತುಳೇರ, ವಿಜಯಕುಮಾರ ಕಟ್ಟಿಮನಿ, ವರದಸ್ವಾಮಿ ಇನ್ನಿತರರು ಹಾಜರಿದ್ದರು.