ಬೆಂಗಳೂರು: ಬಿಸಿ ನೀರು ಇದ್ದ ಬಿಂದಿಗೆ ಮೇಲೆ ಆಯತಪ್ಪಿ ಬಿದ್ದು, ಸುಟ್ಟಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ನಗರದ ಹೊರ ವಲಯದ ಅಂದ್ರಹಳ್ಳಿಯ ತಿಮ್ಮರಾಜು ಮತ್ತು ಶಾರದಮ್ಮ ದಂಪತಿ ಪುತ್ರಿ ಭವ್ಯ ಮೃತ ಬಾಲಕಿ. ಫೆ.9 ರಂದು ಘಟನೆ ನಡೆದಿದ್ದು, ಬಾಲಕಿ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾಗಿ ಬ್ಯಾಡರಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ತಿಮ್ಮರಾಜು ಮತ್ತು ಶಾರದಮ್ಮ ದಂಪತಿ ಕೆಲ ವರ್ಷಗಳ ಹಿಂದೆ ಅಂದ್ರಹಳ್ಳಿಯಲ್ಲಿ ಬಂದು ನೆಲೆಸಿದ್ದಾರೆ. ತಿಮ್ಮರಾಜು ಕೂಲಿ ಕಾರ್ಮಿಕರಾಗಿದ್ದು, ಶಾರದಮ್ಮ ಮನೆಯಲ್ಲಿ ಇರುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕಿರಿಯ ಮಗಳು ಭವ್ಯ ಅಂದ್ರಹಳ್ಳಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಕಳೆದ ಫೆ.9 ರಂದು ಶಾರದಮ್ಮ ಅವರು ತಾವು ಸ್ನಾನ ಮಾಡಲು ಬಿಂದಿಗೆಯಲ್ಲಿ ನೀರು ತುಂಬಿಸಿ “ಹೀಟರ್’ ಹಾಕಿದ್ದರು. ಸ್ನಾನ ಮಾಡಲು ಶಾಂಪೂ ಇಲ್ಲದ ಕಾರಣ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಂಪೂ ತರಲು ಅಂಗಡಿಗೆ ತೆರಳಿದ್ದರು. ಶಾಲೆ ಮುಗಿಸಿಕೊಂಡು ಬಂದಿದ್ದ ಮಗಳು ಭವ್ಯ ಮನೆಯಲ್ಲಿ ಇದ್ದಳು. ಮನೆಯಲ್ಲಿ ಆಟವಾಡಿಕೊಂಡಿದ್ದ ಭವ್ಯ ಆಯತಪ್ಪಿ ಬಿಂದಿಗೆ ಮೇಲೆ ಬಿದ್ದಿದ್ದಾಳೆ. ಈ ವೇಳೆ ಕೆಳಗೆ ಬಿದ್ದ ಭವ್ಯ ಮೇಲೆ ಬಿಂದಿಗೆ ಬಿದ್ದು, ಬಿಸಿ ನೀರು ಆಕೆಯ ಮೈ ಮೇಲೆ ಚೆಲ್ಲಿದೆ.
ಇದರಿಂದ ಬಾಲಕಿಯ ಎದೆ ಹಾಗೂ ಕಾಲಿನ ಭಾಗದಲ್ಲಿ ಸುಟ್ಟುಗಾಯಗಳಾಗಿತ್ತು. ಮನೆಗೆ ಬಂದ ಶಾರದಮ್ಮ ಕೂಡಲೇ ಪತಿಗೆ ವಿಷಯ ತಿಳಿಸಿ ಮಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಭವ್ಯಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ತಡ ರಾತ್ರಿ 3 ಗಂಟೆ ಸುಮಾರಿಗೆ ಬಾಲಕಿ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.