ಧಾರವಾಡ: ಇಲ್ಲಿನ ಮುರುಘಾಮಠದ ಹಿಂದಿನ ಪೀಠಾಧಿಪತಿಗಳಾ ಗಿದ್ದ ಶ್ರೀ ಶಿವಯೋಗಿ ಸ್ವಾಮೀಜಿ (55) ಬುಧವಾರ ಲಿಂಗೈಕ್ಯರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಅವರು ಬುಧವಾರ ಸಂಜೆ ಲಿಂಗೈಕ್ಯರಾದರು.
ಮುರುಘಾಮಠದ ಪೀಠಾಧಿಪತಿ ಯಾಗಿದ್ದ ವೇಳೆ ಅವರ ವಿರುದ್ಧ ಮಠದ ಆಸ್ತಿ ಮಾರಾಟಕ್ಕೆ ಸಂಚು ರೂಪಿಸಿದ ಆರೋಪವಿತ್ತು. ನಂತರ ಭಕ್ತರು ಅವರನ್ನು ಮಠದ ಪೀಠದಿಂದ ಕೆಳಗಿಳಿಸಿದ್ದರು. ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದು, ಪ್ರಕರಣ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ವಿವಾದಕ್ಕೆ ಸಂಬಂಧಿಸಿದಂತೆ ಅವರು, ಇತ್ತೀಚೆಗಷ್ಟೇ ಮತ್ತೆ ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಕೆಲವರ ಹೆಸರು ಹೇಳಿ ಆರೋಪಿಸಿ, ದಯಾಮರಣ ನೀಡುವಂತೆ ಕೂಡ ಕೋರ್ಟ್‌ಗೆ ಮನವಿ ಮಾಡಿದ್ದರು.
ಮೂಲತಃ ಕುಂದಗೋಳ ತಾಲೂಕು ಪಶುಪತಿಹಾಳದವರಾಗಿದ್ದ ಶಿವಯೋಗಿ ಸ್ವಾಮೀಜಿಗಳು ಪ್ರಾಥಮಿಕ ಶಿಕ್ಷಣ ಅಲ್ಲಿಯೇ ಮುಗಿಸಿ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಧಾರವಾಡಕ್ಕೆ ಬಂದು ಮುರುಘಾಮಠದಲ್ಲಿಯೇ ಉಳಿದುಕೊಂಡು ಪೂರ್ಣಗೊಳಿಸಿದ್ದರು. ಶ್ರೀ ಶಿವಯೋಗಿ ಸ್ವಾಮೀಜಿ ಅವರನ್ನು 1994ರಲ್ಲಿ ಮಠದ ಪೀಠಾಧಿಪತಿಯನ್ನಾಗಿ ನೇಮಿಸಲಾಗಿತ್ತು. ಆದರೆ ಮಠದ ಆಸ್ತಿ ಮಾರಾಟಕ್ಕೆ ಕುರಿತು ಶ್ರೀಗಳು ಮತ್ತು ಭಕ್ತರ ನಡುವೆ ವಿವಾದ ಸೃಷ್ಟಿಯಾಗಿ 2009ರಲ್ಲಿ ಬಲವಂತವಾಗಿ ಪೀಠದಿಂದ ಕೆಳಗಿಳಿಸಲಾಗಿತ್ತು. ಈ ನಡುವೆ ಮಠ ಮತ್ತು ಶ್ರಿಗಳ ನಡುವೆ ರಾಜಿ ಸಂಧಾನ ನಡೆದಿತ್ತು. ಅಷ್ಟರಲ್ಲಿ ಅವರು ಲಿಂಗೈಕ್ಯರಾಗಿದ್ದಾರೆ.
ಕಂಬನಿ ಮಿಡಿದ ಗಣ್ಯರು: ಶ್ರೀ ಶಿವಯೋಗಿ ಸ್ವಾಮೀಜಿ ಲಿಂಗ್ಯಕ್ಯರಾಗಿರುವುದಕ್ಕೆ ಲಿಂಗಾಯತ ಸಮಾಜದ ಗಣ್ಯರು ತೀವ್ರ ಸಂತಾಪ ಸೂಚಿಸಿ ನೆಚ್ಚಿನ ಗುರುವಿಗೆ ಕಂಬನಿ ಮಿಡಿದಿದ್ದಾರೆ. ಅಖೀಲ ಭಾರತ ವೀರಶೈವ ಮಹಾಸಭೆ ಪದಾಧಿಕಾರಿಗಳು, ಲಿಂಗಾಯತ ನೌಕರರ ಸಂಘ ಮತ್ತು ಭಕ್ತ ಮಂಡಳಿ ಶಿವಯೋಗಿ ಶ್ರೀಗಳು ಲಿಂಗೈಕ್ಯರಾಗಿದ್ದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಯೋಗಿ ಸ್ವಾಮೀಜಿ ಉತ್ತಮ ವ್ಯಕ್ತಿಯಾಗಿ ದ್ದರು. ಆದರೆ ದುರ್ದೈವವಶಾತ್ ಅವರ ಮೇಲೆ ವಿವಾದಗಳು ಬಂದಿದ್ದರಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು. ಅವರ ಅಗಲಿಕೆ ಮಠದ ಭಕ್ತರಿಗೆ ನೋವನ್ನುಂಟು ಮಾಡಿದೆ. ಬಸವಾದಿ ಶರಣರು ಅವರ ಆತ್ಮಕ್ಕೆ ಶಾಂತಿ ನೀಡಲಿ.
-ಗುರುರಾಜ ಹುಣಸಿಮರದ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ,