ದೇವನಹಳ್ಳಿ: ಕೃಷಿ ಹೊಂಡದಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾಳೀಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಕಮಲನಗರ ನಿವಾಸಿ ಸುಧಾಕರ್ ಮಗ ವರ್ಷಣ್ (17) ಮೃತಪಟ್ಟ ದುರ್ದೈವಿ. ಬೆಳಗ್ಗೆ ಮೆಜೆಸ್ಟಿಕ್‌ನ ಅಣ್ಣಮ್ಮ ದೇವಿ ದರ್ಶನ ಮಾಡಿಕೊಂಡು ಬರುವುದಾಗಿ ಹೇಳಿ ಏಳು ಜನ ಸ್ನೇಹಿತರ ಜೊತೆ ನಂದಿಬೆಟ್ಟಕ್ಕೆ ತೆರಳಿದ್ದರು. ನಂದಿ ಬೆಟ್ಟದ ಪ್ರವಾಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದ ವೇಳೆ ಮಾರ್ಗ ಮಧ್ಯೆ ಬೆಟ್ಟದಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ನಂತರ ಕಾಲಿಗೆ ಕೆಸರು ಆಗಿದ್ದರಿಂದ ಕಾಲನ್ನು ತೊಳೆದುಕೊಳ್ಳಲು ಕೃಷಿ ಹೊಂಡಕ್ಕೆ ಹೋಗಿದ್ದರು. ಆಗ ವರ್ಷಣ್ ಈಜಲು ಆಸೆಯಾಗಿ ಇಳಿದ ಪರಿಣಾಮ ಹೂಳುನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.
ವರ್ಷದ ಹಿಂದೆ ನಿರ್ಮಾಣವಾಗಿದ್ದ ಕೃಷಿ ಹೊಂಡ: ವರ್ಷಿಣ್ ಸ್ನೇಹಿತರಾದ ವೆಂಕಟೇಶ್, ಅಬೀಬ್, ಮನೋಜ್, ರಂಗಸ್ವಾಮಿ, ಫಕೃದ್ದೀನ್, ಇತರರ ಜೊತೆ ನಂದಿಬೆಟ್ಟಕ್ಕೆ ಬಂದಿದ್ದ ಎನ್ನಲಾಗಿದೆ. ಮಾಳಿಗೇನಹಳ್ಳಿ ಗ್ರಾಮದ ರೈತ ವೆಂಕಟೇಶ್ ತೋಟದಲ್ಲಿ ಕೃಷಿ ಹೊಂಡ ಕಳೆದ ಒಂದು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು. ವಿಶ್ವನಾಥಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೀರಿನಲ್ಲಿ ಈಜಾಡಲು ಇಳಿದಿದ್ದ ಮೂವರು ಸ್ನೇಹಿತರಲ್ಲಿ ಇಬ್ಬರು ನೀರಿನಲ್ಲಿ ಮುಳುಗಲು ಆರಂಭಿಸಿದ್ದು ಎಚ್ಚೆತ್ತ ಉಳಿದ ಸ್ನೇಹಿತರು ಅವರನ್ನು ರಕ್ಷಿಸಿದ್ದಾರೆ.
ಆದರೆ ಈ ವೇಳೆಗಾಗಲೇ ಹೊಂಡದ ಮಧ್ಯಭಾಗಕ್ಕೆ ವರ್ಷಣ್ ತೆರಳಿದ್ದ ಪರಿಣಾಮ ನೀರಿನಲ್ಲಿ ಮುಳುಗುವಾಗ ಸ್ನೇಹಿತರು ನೆರವಿಗಾಗಿ ಕೂಗಾಡಿದ್ದು, ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಹೊಂಡದಲ್ಲಿ ಮುಳುಗಿದ್ದ ವರ್ಷಣ್‌ನನ್ನು ಹೊರತೆಗೆದಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ವರ್ಷಣ್ ಪ್ರಾಣ ಪಕ್ಷಿ ಹಾರಿಹೋಗಿದ್ದು, ಸ್ಥಳಕ್ಕಾಗಮಿಸಿದ ಮೃತನ ತಾಯಿ ರೇಣುಕಾ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಖಲಿಸಲಾಗಿದೆ. ಸೋಮವಾರ ಅಷ್ಟೇ ಇಬ್ಬರು ಹೆಣ್ಣುಮಕ್ಕಳು ತಾಲೂಕಿನ ಐ ಬಸಾಪುರದಲ್ಲಿ ಕುಂಟೆಗೆ ಜಾರಿಬಿದ್ದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಈ ಘಟನೆ ಸಂಭವಿಸಿದೆ. ಈ ಕೂಡಲೇ ಕೃಷಿ ಹೊಂಡಗಳು, ಕೆರೆಕಟ್ಟೆಗಳು, ಕುಂಟೆಗಳಿಗೆ ಅಡ್ಡಗೋಡೆ ನಿರ್ಮಾಣವಾದರೆ ಇಂಥ ಘಟನೆಗಳು ಮರುಕಳಿಸುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಇಂಥ ಘಟನೆ ನಡೆಯದಂತೆ ಜಾಗೃತ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.