ಹರಪನಹಳ್ಳಿ: ಅಂತರ್ಜಲ ಕುಸಿತದಿಂದ ನೀರು ಇಂಗಿ ಹೋಗಿ ತಾಲೂಕಿನ ಅಲಮರಸೀಕೆರೆ ಗ್ರಾಮದ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದ ಹಿನ್ನೆಲೆಯಲ್ಲಿ ಸೋಮವಾರ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸತ್ತಿರುವ ಮೀನುಗಳಿಂದ ಹೊರ ಸೂಸುತ್ತಿರುವ ದುರ್ವಾಸನೆಯಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ತಪ್ಪಿಸಲು ಕೆರೆಯ ದಡ ಮತ್ತು ಕೆರೆಯ ತುಂಬಾ ಬೆಳಗ್ಗೆ 25 ಕೆ.ಜಿ ಪ್ಯಾಕೆಟ್ 6, ಮಧ್ಯಾಹ್ನ 4 ಪ್ಯಾಕೆಟ್ ಸೇರಿ ಒಟ್ಟು 10 ಪ್ಯಾಕೆಟ್ ಬ್ಲಿಚಿಂಗ್ ಪೌಡರ್ ಹಾಕಲಾಗಿದೆ.
ನೀರು ಕಡಿಮೆಯಾಗಿ ಬಿಸಿಲಿನ ತಾಪಮಾನದಿಂದ ಮೀನುಗಳು ಸತ್ತಿವೆ. ಇದರಿಂದ ಯಾವುದೇ ತರಹದ ಸಾಂಕ್ರಾಮಿಕ ರೋಗ ಹರಡುವುದಿಲ್ಲ ಎಂದು ಮೀನುಗಾರಿಗೆ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಎಲ್.ದೊಡ್ಮನೆ ತಿಳಿಸಿದ್ದಾರೆ.
ಕೆರೆಯ ಬಳಿ ಯಾರು ತೆರಳದಂತೆ ಹಾಗೂ ಜಾನುವಾರುಗಳಿಗೆ ನೀರು ಕುಡಿಸದಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ಭಾನುವಾರ ಇದ್ದಷ್ಟು ವಾಸನೆ ಸೋಮವಾರ ಇರಲಿಲ್ಲ. ಇನ್ನೊಂದು ದಿನ ಕಳೆದರೆ ಬಿಸಿಲಿಗೆ ಮೀನುಗಳು ಒಣಗಿ ವಾಸನೆ ಕಡಿಮೆಯಾಗಲಿದೆ.
ಇನ್ನೊಮ್ಮೆ ಯಾರು ಕೆರೆಯ ತೂಬು ಎತ್ತದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮೇಶ್, ಕೆರೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಈ. ಗಂಗಪ್ಪ, ಹಾರಕನಾಳು ಆಸ್ಪತ್ರೆ ವೈದ್ಯಾಧಿಕಾರಿ ವಿಜಯಕುಮಾರ ಇತರರು ಇದ್ದರು.