ಬೆಂಗಳೂರು: ರಾಜರಾಜೇಶ್ವರಿನಗರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ರಾಜಕಾಲುವೆ ಸಮೀಪ ನಡೆಯುತ್ತಿದ್ದ ಒಳಚರಂಡಿ ಪೈಪ್‌ಲೈನ್ ವೇಳೆ ಕಾಲುವೆಯ ತಡೆಗೋಡೆ ಮಣ್ಣು ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟು, ಆರು ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ನಡೆದಿದೆ.
ಕಲಬುರಗಿ ಮೂಲದ ಮಡಿವಾಳಪ್ಪ ಗೌಡ (26) ಮೃತರು. ರಾಜಕಾಲುವೆಗೆ ಸೇರುತ್ತಿದ್ದ ಒಳಚರಂಡಿ ನೀರು ತಪ್ಪಿಸುವ ಸಲುವಾಗಿ 100 ಮೀಟರ್ ಒಳಚರಂಡಿ ಪೈಪ್ ಅಳವಡಿಸುವ ಕಾಮಗಾರಿಯನ್ನು ಏಳು ಕಾರ್ಮಿಕರು ಮತ್ತು ಜೆಸಿಬಿ ಬುಧವಾರ ಕಾರ್ಯನಿರ್ವಹಿಸುತ್ತಿತ್ತು. ಮಧ್ಯಾಹ್ನ 1:20ರ ಸುಮಾರಿಗೆ ರಾಜಕಾಲುವೆಯ ತಡೆಗೋಡೆ ಮಣ್ಣು ಕುಸಿದು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು. ಈ ಘಟನೆಯನ್ನು ನೋಡಿಕೊಂಡ ಸ್ಥಳೀಯರು ನಾಲ್ವರನ್ನು ರಕ್ಷಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದ್ದಾರೆ. ಮಡಿವಾಳಪ್ಪನ ಮೇಲೆ ಭಾರೀ ಪ್ರಮಾಣದ ಮಣ್ಣುಬಿದಿತ್ತು, ಜತೆಗೆ ರಾಜಕಾಲುವೆ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವೇಗವಾಗಿ ಕಾರ್ಯಾಚರಣೆ ನಡೆಸಲು ತೊಡಕಾಗಿತ್ತು. ಸತತ ಕಾರ್ಯಾಚರಣೆ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಮಡಿವಾಳಪ್ಪನ ಶವ ಹೊರತೆಗೆಯಲಾಯಿತು.
ಬೆಂಗಳೂರು ಜಲಮಂಡಳಿ ಅಮೃತ್ ಸಿಟಿ ಯೋಜನೆ ಅಡಿಯಲ್ಲಿ ಈ ಕಾಮಗಾರಿ ನಡೆಸುತ್ತಿದ್ದು, ಕೆಬಿಎಸ್ ಕಂಪನಿಯ ಹೊಸಕೆರೆಹಳ್ಳಿ ರವಿ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣ ದುರ್ಘಟನೆ ನಡೆದಿದೆ. ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೇವರ್ಗಿ ತಾಲೂಕಿನ ಮಡಿವಾಳಪ್ಪ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ರಾಜರಾಜೇಶ್ವರಿ ನಗರದಲ್ಲಿ ಪತ್ನಿ ಹಾಗೂ ಪುತ್ರಿ ಜತೆ ನೆಲೆಸಿದ್ದು, ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.