ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಮರಣದಂಡನೆ ಶಿಕ್ಷೆ ವಿಧಿಸಲು ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಮಂಗಳವಾರ ಡೆತ್ ವಾರಂಟ್ ಅನ್ನು ಜಾರಿಗೊಳಿಸಿದೆ. ಇದರಿಂದ ಪ್ರಕರಣ ನಡೆದು ಏಳು ವರ್ಷಗಳ ಬಳಿಕ ಅಪರಾಧಿಗಳು ಗಲ್ಲುಗೇರುವಂತಾಗಿದೆ.
ಅಕ್ಷಯ್ ಠಾಕೂರ್ ಸಿಂಗ್, ಮುಕೇಶ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ 2012ರ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿದ್ದು, ಜನವರಿ 22ರಂದು ನೇಣುಗಂಬ ಏರಲಿದ್ದಾರೆ.
ಏಳು ವರ್ಷದ ಬಳಿಕ ನಿರ್ಭಯಾಗೆ ನ್ಯಾಯ; ತಾಯಿ
ಏಳು ವರ್ಷಗಳ ಸುದೀರ್ಘ ಕಾನೂನು ಸಮರದ ನಂತರ ಕೊನೆಗೂ ಈ ದೇಶದ ಮಗಳು ನಿರ್ಭಯಾಗೆ ನ್ಯಾಯಾ ಸಿಕ್ಕಂತಾಗಿದೆ ಎಂದು ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಜಾರಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ನಿರ್ಭಯಾ ತಾಯಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ತೀರ್ಪಿನಿಂದ ಜನರಿಗೆ ನ್ಯಾಯಾಂಗದ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ. ನನ್ನ ಮಗಳಿಗೆ ನ್ಯಾಯ ಸಿಕ್ಕಂತಾಗಿದೆ. ದೇಶದ ಮಗಳಿಗೆ ನ್ಯಾಯ ದೊರೆತಂತಾಗಿದೆ ಎಂದು ಹೇಳಿದರು.
ಕೋರ್ಟ್ ತೀರ್ಪಿನಿಂದ ನನಗೆ ಸಂತಸವಾಗಿದೆ. ಅಪರಾಧಿಗಳನ್ನು ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೆ ಏರಿಸಲಿದ್ದಾರೆ. ಇದರಿಂದ ಇಂತಹ ದುಷ್ಕೃತ್ಯ ನಡೆಸುವ ಕಾಮುಕರಿಗೆ ಭಯ ಹುಟ್ಟಿಸಲಿದೆ ಎಂದು ನಿರ್ಭಯಾ ತಂದೆ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.