Advertisement

ಪ್ರಜಾಪ್ರಭುತ್ವಕ್ಕೆ ಅಪಾಯ ಬಂದ್ರೆ ಜನರಿಂದ ಪೆಟ್ಟು

11:12 PM Oct 25, 2019 | Team Udayavani |

ಬೆಂಗಳೂರು: ಪ್ರಧಾನಿ ಮೋದಿಯವರ ಐದು ವರ್ಷ, ನಾಲ್ಕು ತಿಂಗಳ ಆಡಳಿತದಲ್ಲಿ ಪ್ರಾದೇಶಿಕ ಪಕ್ಷಗಳನ್ನು, ಕಾಂಗ್ರೆಸ್‌ ಶಕ್ತಿಯನ್ನು ಕುಂದಿಸಲು ಆಡಳಿತ ಯಂತ್ರ ಬಳಕೆ ಮಾಡಿಕೊಂಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಬರುವ ಸನ್ನಿವೇಶ ಬಂದಾಗ ಅದಕ್ಕೆ ಪೆಟ್ಟು ಕೊಡಬಹುದು ಎಂಬ ಸಂದೇಶವನ್ನು ಜನ ನೀಡಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣಾ ಫ‌ಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು, ಕೇವಲ ಮಾತಿನ ಮೂಲಕ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನಿರುದ್ಯೋಗ ಕಾಡುತ್ತಿದೆ. ದೇಶದಲ್ಲಿ ಒಂದಲ್ಲ ಒಂದು ಸಮಸ್ಯೆ ಇದೆ. ಪ್ರಧಾನಿ ಮೋದಿಯವರು ಈಗಲಾದರೂ ಆ ಸಮಸ್ಯೆಗಳ ನಿವಾರಣೆಗೆ ಗಮನ ನೀಡಲಿ ಎಂದು ಸಲಹೆ ನೀಡಿದರು.

ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರನ್ನು ಇಡಿ ಬಂಧಿಸುವ ವಿಚಾರ ಬಂತು. ಹೀಗೆ ಮಾಡಿದ್ದೇ ಎನ್‌ಸಿಪಿಗೆ ಹೆಚ್ಚು ಸ್ಥಾನ ಪಡೆಯಲು ಕಾರಣವಾಯಿತು. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಮಳೆಯಲ್ಲಿ ನಿಂತು ಪ್ರಚಾರ ಮಾಡಿದ ಕಾರಣಕ್ಕೆ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಯಿತು. ಇನ್ನಾದರೂ ಮೋದಿಯವರು ಇಂತಹ ಕೆಲಸಗಳಿಗೆ ಕೈ ಹಾಕದೆ ಜನರ ಸಮಸ್ಯೆ ಬಗ್ಗೆ ಗಮನ ಹರಿಸಲಿ ಎಂದು ಮಾರ್ಮಿಕವಾಗಿ ನುಡಿದರು.

ಹಾಗೆಯೇ ಎರಡು ರಾಜ್ಯಗಳ ಚುನಾವಣಾ ಫ‌ಲಿತಾಂಶವು ಪ್ರಾದೇಶಿಕ ಪಕ್ಷಗಳನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬ ಸಂದೇಶ ವನ್ನೂ ರವಾನಿಸಿದೆ. ಇದನ್ನು ಎಲ್ಲರೂ ಗಮನಿಸಬೇಕು ಎಂದು ಹೇಳಿದರು.ಸಿದ್ದರಾಮಯ್ಯ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ಕುಮಾರಸ್ವಾಮಿ ಹೇಳಿರುವುದು ಸರಿಯಾಗಿದೆ.

ಸಿದ್ದರಾಮಯ್ಯ ಅವರು ಎಲ್ಲ ಸಾರ್ವಜನಿಕ ಸಭೆಗಳಲ್ಲಿ ಅವರಪ್ಪರಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದ್ದರು. ಕ್ಯಾಬಿನೆಟ್‌ ಬಳಿಕ ಬಾದಾಮಿಗೆ ಸಿದ್ದರಾಮಯ್ಯ ಹೋದ ನಂತರ ಇಲ್ಲಿ ಕಾಂಗ್ರೆಸ್‌ ಆಟಗಳು ಶುರುವಾಯಿತು. ನಂತರ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಸೂಚಿಸಿತು. ಬಳಿಕ ಸರಿಪಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು ಎಂದು ಸ್ಮರಿಸಿದರು.

Advertisement

ನಂತರ ಧರ್ಮಸ್ಥಳದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಧರ್ಮಸ್ಥಳದ ನಂತರ ಲಂಡನ್‌, ಮಲೇಷಿಯಾಗೆ ಹೋದರು. ಆಮೇಲೆ ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿಸಿದರು. ನಂತರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕುಮಾರಸ್ವಾಮಿ ನೇಮಕ ಮಾಡಿದ್ದವರನ್ನು ತೆಗೆದು ತಮಗೆ ಬೇಕಾದವರನ್ನು ನೇಮಕ ಮಾಡಿಸಿದರು. ಅಪ್ಪ-ಮಕ್ಕಳನ್ನು ಮುಗಿಸಬೇಕೆಂದು ಸಿದ್ದರಾಮಯ್ಯ ಹೇಳಿದ್ದರು. ಹಾಗಾಗಿ ಕುಮಾರಸ್ವಾಮಿ ಹೇಳಿದ್ದು ಸರಿಯಾಗಿಯೇ ಇದೆ ಎಂದರು.

ಕುಮಾರಸ್ವಾಮಿ ಅವರಿಗೆ ಅನರ್ಹ ಶಾಸಕ ನಾರಾಯಣಗೌಡ ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾರಾಯಣಗೌಡ ತುಂಬಾ ದೊಡ್ಡವರು. ಅವರು ಮುಂಬೈನಲ್ಲಿ ದೊಡ್ಡ ಹೋಟೆಲ್‌ ಉದ್ಯಮ ಮಾಡಿದವರು. ಆನಂತರ ಇಲ್ಲಿಗೆ ಬಂದು ಜನ ಸೇವೆ ಮಾಡುವುದಾಗಿ ಹೇಳಿದರು. ಅವರ ಮುಂದೆ ನಾವು ಸವಾಲು ಹಾಕಲು ಸಾಧ್ಯವೇ? ಅವರ ಬಗ್ಗೆ ನಾವು ಮಾತನಾಡಲು ಆಗುವುದೇ ಎಂದು ಹೇಳಿದರು.

ಹಿಂದೆ ಎಚ್‌.ಡಿ.ರೇವಣ್ಣ ಕೆಎಂಎಫ್ನಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ನೀಡಿದ್ದಾರೆ. ನಷ್ಟದಲ್ಲಿದ್ದ ಸಂಸ್ಥೆಗೆ 4000 ಕೋಟಿ ರೂ. ಆಸ್ತಿ ಮಾಡಿಕೊಟ್ಟಿದ್ದಾರೆ. ರೇವಣ್ಣ ಅವರನ್ನು ಮಿಲ್ಕ್ ಮ್ಯಾನ್‌ ಎಂದು ಕರೆದಿದ್ದರು. ಈಗ ಹಾಲು ಆಮದು ಮಾಡಿಕೊಳ್ಳುವು ದಾಗಿ ಹೇಳಿದರೆ ರೈತರಿಗೆ ತೊಂದರೆಯಾಗಲಿದೆ. ಇದರ ವಿರುದ್ಧ ನಾನೂ ತೀವ್ರ ಹೋರಾಟ ಮಾಡುತ್ತೇನೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next