ಬಸವಕಲ್ಯಾಣ: ಉತ್ತಮ ಪರಿಸರದಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆರೋಗ್ಯಪೂರ್ಣ ಬದುಕಿಗೆ ಅಗತ್ಯವಿರುವ ಪರಿಸರ ಸಂರಕ್ಷಿಸಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಹಾರಕೂಡ ಡಾ| ಚೆನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಅರಣ್ಯ ಇಲಾಖೆ, ಬೀದರ ಪರಿಸರ ವಾಹಿನಿ ಹಾಗೂ ಚಾಲುಕ್ಯ ಶಿಕ್ಷಣ ಸಂಸ್ಥೆ ಮರಕುಂದಾ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಜನಜಾಗೃತಿ ಹಾಗೂ ಕೋಟಿ ವೃಕ್ಷ ಆಂದೋಲನ ನಿಮಿತ್ತ ಆಯೋಜಿಸಲಾಗಿದ್ದ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆ ಅಬ್ಬರದಲ್ಲಿ ಪರಿಸರನಾಶದಿಂದ ಪರಿಸರದ ಮೆಲೆ ಪ್ರತಿಕೂಲ ಪರಿಣಾಮವಾಗುತ್ತಿದೆ ಎಂದು ಕಳವಳ ವ್ಯಕ್ತಪಿಸಿದರು.
ಪರಿಸರ ನಾಶವಾದರೆ ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ. ಭವಿಷ್ಯದ ದೃಷ್ಟಿಯಿಂದ ಪರಿಸರ ಸಂರಕ್ಷಣೆ ಅವಶ್ಯಕವಾಗಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಮರಗಿಡಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಜತೆಗೆ ಅವುಗಳನ್ನು ಕಾಳಜಿಯಿಂದ ಪೋಷಿಸಿ ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಮಾತನಾಡಿ, ರಾಷ್ಟ್ರೀಯ ಹಸಿರು ಪಡೆ ಯೋಜನೆ ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಸಹಾಯಕವಾಗಿದೆ. ಬೀದರ ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್ ಸ್ಥಾಪಿಸಲಾಗಿದೆ ಎಂದರು.
ಪರಿಸರ ಅಸಮತೋಲನದಿಂದಾಗಿ ಜೀವ ವೈವಿದ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಅನೇಕ ಪ್ರಾಣಿ ಪಕ್ಷಿಗಳು ಕೂಡ ಮಾಯವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಔಷಧ ಸಸ್ಯಗಳಾದ ಅಮೃತಬಳ್ಳಿ, ತುಳಸಿ ಹಾಗೂ ನವಳಸರಾ ಕಡ್ಡಾಯವಾಗಿ ಮನೆ ಅಂಗಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ 200 ಸಸಿಗಳನ್ನು ವಿತರಿಸಲಾಯಿತು.
ಅರಣ್ಯ ರಕ್ಷಕ ಗುರುಪಾದಯ್ಯ ಸ್ವಾಗತಿಸಿದರು. ಅಪ್ಪರಾವ್ ವಂದಿಸಿದರು.