Advertisement

ನಾವೀನ್ಯದ ಅನ್ವೇಷಣೆಯ ಕಾಂಚನ ಸಹೋದರಿಯರ ದ್ವಂದ್ವ ಗಾಯನ

06:00 AM Sep 07, 2018 | |

ಇತ್ತೀಚಿನ ದಿನಗಳಲ್ಲಿ ದ್ವಂದ್ವಗಾಯನ ಯಾ ವಾದನಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ವಿಷಯ. ಮನಸೂರೆಗೊಂಡ ಒಂದು ಉತ್ತಮವಾದ ಜಂಟಿ ಗಾಯನವನ್ನು ನೀಡಿದವರು “ಕಾಂಚನ ಸಹೋದರಿಯರು’ ಎಂದೇ ಪ್ರಸಿದ್ಧರಾಗಿರುವ ರಂಜನಿ ಮತ್ತು ಶ್ರುತಿರಂಜನಿ. ಆ.1ರಂದು ಪರ್ಕಳದ “ಸರಿಗಮ ಭಾರತಿ’ ಸಭಾಂಗಣದಲ್ಲಿ ಈ ಹಾಡುಗಾರಿಕೆ ನಡೆಯಿತು. ಸದಾ ನಾವೀನ್ಯದ ಅನ್ವೇಷಣೆಯಲ್ಲಿ ತೊಡಗಿರುವ ಮತ್ತು ಸಮಕಾಲೀನ ಗಾಯಕರಿಂದ ಭಿನ್ನ ರೀತಿಯಲ್ಲಿ ನಿರೂಪಿಸುವ ಈ ಗಾಯಕಿಯರ ಕಛೇರಿ ಒಂದು ವಿಶಿಷ್ಟವಾದ ಅನುಭವವಾಗಿತ್ತು.

Advertisement

ಸುಮಾರು 3 ಗಂಟೆ ಕಾಲ ನಡೆದ ಕಛೇರಿ ಯಲ್ಲಿ ಪ್ರಾರಂಭದಿಂದ ಅಂತ್ಯದವರೆಗೂ ಏಕಪ್ರಕಾರವಾಗಿ ವಿಜೃಂಭಿಸಿದ ಬಿಗುತನ, ಲವಲವಿಕೆ, ಹೊಸತನದ ಹೊಳಹುಗಳು, ಘನ, ನಯ ಎರಡಕ್ಕೂ ಸೈಯೆನ್ನುವ ಆತ್ಮವಿಶ್ವಾಸ. ಕೆಲವು ಕಾಲ ಮನದಲ್ಲಿ ನಿಲ್ಲುವಂತಿದ್ದು ಪಂಡಿತ, ಪಾಮರರಿಬ್ಬರನ್ನೂ ರಂಜಿಸಿದ ಕಛೇರಿ ಇದಾಗಿತ್ತು. ಅಟತಾಳ ಭೈರವಿ ವರ್ಣ ವಿಳಂಬ, ತಿಸ್ರ ಮತ್ತು 2-3ನೆ ಕಾಲಗಳಲ್ಲಿ ಸರಾಗವಾಗಿ ಮೂಡಿಬಂದು ಕಛೇರಿಗೆ ಗಟ್ಟಿಯಾದ ಬುನಾದಿಯೆನಿಸಿತು. ಭಾವಪೂರ್ಣವಾಗಿ, ಗಮಕಯುಕ್ತವಾಗಿ ನಿಧಾನಗತಿಯಲ್ಲಿ ಹಿಂಜಲಾದ ಯದುಕುಲ ಕಾಂಭೋಜಿಯ (ಎಚ್ಚರಿಗಗಾ) ರಾಗಾಲಾಪನೆ ಮತ್ತು ಖಂಡ ಏಕದಲ್ಲಿ ಹಾಡಲಾದ ಕ್ಷತ್ರಿಯ ಸಾಂದ್ರತೆ ಉತ್ಕೃಷ್ಟವಾಗಿತ್ತು. ಮುಂದೆ ರಂಜನಿ ರಾಗದ ಕೃತಿ (ದುರ್ಮಾರ್ಗ ಚರಾ) ಕರುಣೆ ಮತ್ತು ವಿಷಾಧ ಛಾಯೆಗಳನ್ನು ತೆರೆದಿಟ್ಟ ಆಲಾಪನೆ ಮತ್ತು ಆಕರ್ಷಕವಾದ “ಪೊರುತ್ತಂ’ ಒಳಗೊಂಡ ಸ್ವರಕಲ್ಪನೆಗಳಿಂದ ಕೂಡಿತ್ತು.

ಪ್ರಧಾನ ರಾಗ ಕೀರವಾಣಿ (ಗಲಿಕಿಯುಂಡ) ಪರ್ಯಾಯವಾಗಿ ನೀಡಲಾದ ರಾಗಾಲಾಪನೆ. ರಾಗ ಸಂಚಾರದ ಖಂಡಗಳನ್ನು ಭಿನ್ನ ಸ್ಥಾಯಿಗಳಲ್ಲಿ ಪರಸ್ಪರರಿಗೆ ಪೂರಕವಾಗುವಂತೆ ಹಾಡಿ ರಾಗಕ್ಕೆ ಅಂದವನ್ನು ನೀಡಿ ಪೋಷಿಸಿದ ಪರಿ ಅನನ್ಯ ಮತ್ತು ಅನುಕರಣೀಯ ಕೃತಿಯಲ್ಲಿ ನೆರವಲ್‌ ಮತ್ತು ಅಗಣಿತ ಮುಕ್ತಾಯಗಳ ಸ್ವರ ಕಲ್ಪನೆಗಳಿದ್ದವು. ಕಛೇರಿಯ ಮುಖ್ಯ ಅಂಗವಾಗಿ ಮೆರೆದದ್ದೆಂದರೆ “ಅವಧಾನ ಪಲ್ಲವಿ’. ಇದರಲ್ಲಿ ಕಲಾವಿದರು ಎರಡು ಕೈಗಳಿಂದ ಬೇರೆ ಬೇರೆ ತಾಳಗಳನ್ನು ಹಾಕುತ್ತ ಸಮನ್ವಯ ಸಾಧಿಸುವ ಸವಾಲಿದೆ.ಬಲಗೈಯಿಂದ “ಸಂಪದ್ವೇಷ್ಟಕ’ ಎಂಬ ಮಾರ್ಗ ತಾಳವನ್ನು ಹಾಗೆಯೇ ಎಡಗೈಯಿಂದ “ರಾಜತಾಳ’ ಎಂಬ ದೇಶೀ ತಾಳವನ್ನು “”ರಾವೇ ಬಾಲಾಂಬಿ | ಕೇ… ದಶ ಮಾತೃಕೇ ಸ್ವರೂಪಿಣಿ” ಎಂಬ ಪಲ್ಲವಿಯನ್ನು ಕಲ್ಯಾಣಿ ರಾಗದಲ್ಲಿ ಕ್ರಮಬದ್ಧವಾಗಿ ಹಾಡಿ ಶ್ರೊತೃಗಳನ್ನು ಬೆರಗುಗೊಳಿಸಿದರು. ರಾಗಮಾಲಿಕೆಯಲ್ಲಿ ಮಾಧುರ್ಯ ಪೂರ್ಣವಾದ ಸ್ವರವಿನಿಕೆಗಳನ್ನು ನೀಡಿ ಗಾಯನದಲ್ಲಿ ತಮ್ಮ ಬದ್ಧತೆ, ಏಕಾಗ್ರತೆ ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಕಠಿನವಾದ ಸ್ವರಸಾಧನೆಗೆ ಸಾಕ್ಷಿ ನೀಡಿದರು. 

ಸ್ವರ ನಂದಿನಿ (ಒಡೆಯರ ಅಪೂರ್ವ ಕೃತಿ) ಶಿವ ರಂಜನಿ (ಶಿವ ಶಿವ ಎನ್ನಿರೋ) ಕಾಪಿ (ಜಗದೋದ್ಧಾರನ) ಪ್ರಸ್ತುತಿಗಳಲ್ಲದೆ ರಾಗಮಾಲಿಕೆ (ಕ್ಷೀರಾಬ್ದಿ ಕನ್ನಿಕೆ)ಮತ್ತು ಪೂರ್ಣ ಚಂದ್ರಿಕ ರಾಗದ ತಿಲ್ಲಾನವನ್ನೂ ಸುಶ್ರಾವ್ಯವಾಗಿ ಹಾಡಿದ ಕಲಾವಿದೆಯರು ಈ ಸಂಗೀತ ಸಂಭ್ರಮವನ್ನು ಸಂಪನ್ನಗೊಳಿಸಿದರು. ಈ ಕಛೇರಿಯಲ್ಲಿ ಆದ್ರìತೆ ಮತ್ತು ಲಾಲಿತ್ಯಗಳಿದ್ದವು. ಅಂತೆಯೇ ಹಿಂದಿನ ಲಾಕ್ಷಣಿಕರು ಸಿದ್ಧಗೊಳಿಸಿದ್ದ ತಾಳ ಪ್ರಮಾಣಗಳಿಗೆ ಮತ್ತೂಮ್ಮೆ ಪುನರ್ಜಿವನ ನೀಡುವ ಕಾಳಜಿಯೂ ಇದ್ದು ಇದೊಂದು ಸಂಪೂರ್ಣ ಕಛೇರಿ ಎನಿಸಿತು.

ವಯಲಿನ್‌ನಲ್ಲಿ ಬಿ. ರಘುರಾಂ ಬೆಂಗಳೂರು ಮತ್ತು ಮೃದಂಗದಲ್ಲಿ ಬಾಲಕೃಷ್ಣ ಕಾಮತ್‌ ಕೊಚ್ಚಿ ಸಹವಾದದಿಂದ ಕಛೇರಿಗೆ ಕಳೆ ನೀಡಿದ್ದಾರೆ. “ಸರಿಗಮ ಭಾರತಿ ಸಂಗೀತ ಶಾಲೆ’ಯ ನಿರ್ದೇಶಕಿ ಶ್ರೀಮತಿ ಉಮಾಶಂಕರಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಈ ಕಛೇರಿಯನ್ನು ಆಯೋಜಿಸಿದ್ದರು.

Advertisement

ಸರೋಜ ಆರ್‌. ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next