ಬೇರ್ಯ: ಕೃಷ್ಣರಾಜನಗರ ತಾಲೂಕಿನ ಪಶುಪತಿ, ಹೆಬೂರು, ಸರಗೂರು ವ್ಯಾಪ್ತಿಯ ಸುಮಾರು 800 ಎಕರೆ ಭೂಮಿಗೆ ನೀರುಣಿಸುವ ಕಟ್ಟೇಪುರ ಅಣೆಕಟ್ಟು ಎಡದಂಡೆ ನಾಲೆಯನ್ನು ವಿರೂಪ ಮಾಡಲಾಗಿದ್ದು,ಇದರಿಂದಾಗಿ ನೀರಿನ ಹರಿವು ತೀರಾ ಕಡಿಮೆಯಾಗಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯ ವಿಧಾನಸಭೆ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿತು.
ಸಮಿತಿ ಸದಸ್ಯರಾದ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಹಾಗು ಹೊನ್ನಾಳಿ ಶಾಸಕ ಶಾಂತನಗೌಡರ್ ಹಾಗು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಅವರೊಂದಿಗೆ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್, 270 ಕ್ಕೂ ಹೆಚ್ಚು ವರ್ಷ ಹಳೆಯದಾದ ರಾಜರ ಕಾಲದ ಕಟ್ಟೇಪುರ ಅಣೆಕಟ್ಟೆ ಎಡದಂಡೆ ನಾಲೆಯನ್ನು ಅಣೆಕಟ್ಟೆ ಬಳಿ ವಿರೂಪಗೊಳಿಸಲಾಗಿದೆ.
ಮೂಲ ನಾಲೆ ಇದ್ದ ಜಾಗದಲ್ಲಿ ನಿರ್ಮಾಣಗೊಂಡಿರುವ ಪವರ್ ಸ್ಟೇಷನ್‌ಗೆ ಹೆಚ್ಚು ನೀರನ್ನು ಹರಿಯುವಂತೆ ಮಾಡಿರುವುದರಿಂದ ಈ ನಾಲೆಯ ಮೂಲಕ ರೈತರ ಜಮೀನಿಗೆ ಹರಿಯುವ ನೀರಿನ ಹರಿವು ಕ್ರಮೇಣ ತೀರಾ ಕಡಿಮೆಯಾಗಿದೆ. ಇದರಿಂದಾಗಿ ನಾಲೆ ಕೊನೆ ಭಾಗದ ಜಮೀನಿಗೆ ಕಳೆದ ನಾಲ್ಕು ವರ್ಷದಿಂದ ಸಮರ್ಪಕ ನೀರು ಹರಿದಿಲ್ಲ. ಹೀಗಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದು, ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ರೈತರಿಗಾಗುತ್ತಿರುವ ತೊಂದರೆಯನ್ನು ಖುದ್ದು ಮನವರಿಕೆ ಮಾಡಿಸಲು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯನ್ನು ಇಲ್ಲಿಗೆ ಕರೆಸಿದ್ದೇನೆ. ಕಮಿಟಿಯ ಮುಂದಿನ ಸಭೆಯಲ್ಲಿ ಅಣೆಕಟ್ಟೆ ಹಾಗೂ ನಾಲೆಯ ಮೂಲ ನಕ್ಷೆಯನ್ನು ಪರಿಶೀಲಿಸಿ ನಾಲೆ ವಿರೂಪಗೊಳಿಸಿರುವ ಸಂಬಂಧ ತನಿಖೆ ನಡೆಸಲು ಆದೇಶಿಸಲಾಗುವುದು ಎಂದು ತಿಳಿಸಿದರು.
ಸಮಸ್ಯೆ ನಿವಾರಣೆ ಭರವಸೆ: ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ಕಟ್ಟೇಪುರ ಎಡದಂಡೆ ನಾಲೆಯ ಕೊನೆಭಾಗದ ರೈತರಿಗಾಗಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಈಗಾಗಲೇ ಈ ಅಣೆಕಟ್ಟೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಎರಡು ವಾರದಲ್ಲಿ ವರದಿ ತರಿಸಿಕೊಳ್ಳಲಾಗುವುದು. ಮುಂದಿನ ಬೆಳೆಗೆ ಸಮರ್ಪಕ ನೀರು ಹರಿಸುವ ಸಂಬಂಧ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಅಲ್ಲಿ ನೆರೆದಿದ್ದ ರೈತರು, ಇಲ್ಲಿ ಪವರ್ ಸ್ಟೇಷನ್ ನಿರ್ಮಾಣಕ್ಕೂ ಮೊದಲು ಈ ನಾಲೆಯಲ್ಲಿ ಸಮರ್ಪಕ ನೀರು ಹರಿಯುತ್ತಿತ್ತು. ಬಳಿಕ ನಾಲೆಯಲ್ಲಿ ಸ್ವಲ್ಪವೂ ನೀರು ಹರಿಯದ ಕಾರಣ ನಾವು ಭಾರೀ ನಷ್ಟ ಅನುಭವಿಸಿದ್ದೇವೆ. ಕೋಟ್ಯಂತರ ರೂ.ಖರ್ಚು ಮಾಡಿ ಈ ನಾಲೆಯನ್ನು ಆಧುನೀಕರಣ ಮಾಡಿದ್ದರೂ ಒಂದಿಷ್ಟೂ ನೀರು ಹರಿಯುತ್ತಿಲ್ಲ. ನೀರೆ ಇಲ್ಲದ ನಾಲೆ ನಮಗೆ ಬೇಡ. ಕೂಡಲೇ ನಾಲೆ ಮುಚ್ಚಿಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ನೀರಾವರಿ ಇಲಾಖೆ ಅಧಿಕಾರಿಗಳು ಗಲಿಬಿಲಿಗೊಂಡರು.
ಸಭೆ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಕಾಳೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಚಂದ್ರಕುಮಾರ್, ಹಾರಂಗಿ ನಾಲಾ ಉಪವಿಭಾಗದ ಎಇಇ ಮಿರ್ಲೆ ಚಂದ್ರಶೇಖರ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ಹಾರಂಗಿ ಕೊಣನೂರು ನಾಲಾ ಉಪವಿಭಾಗದ ಅಧಿಕಾರಿಗಳು ಸೇರಿದಂತೆ ಹೆಬೂರು, ಪಶುಪತಿ ಹಾಗು ಸರಗೂರು ಗ್ರಾಮದ ನೂರಾರು ರೈತರು ಇದ್ದರು.