ಬೆಂಗಳೂರು: ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದ ಪರಿಣಾಮ ಸಂಭವಿಸಿದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟರು.
ಕೃಷ್ಣಪ್ಪ ಲೇಔಟ್ ನಿವಾಸಿ ಅಜಂಬರ್ (32) ಮತ್ತು ಅವರ ಪತ್ನಿ ಪ್ರತಿಮಾ (30) ಮೃತರು. ಘಟನೆಯಲ್ಲಿ ದಂಪತಿ ಪುತ್ರಿಯರಾದ ಶಾಲಿನಿ (3) ಮತ್ತು ಸ್ಮತಿ (7) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಒಡಿಶಾ ಮೂಲದ ಅಜಂಬರ್ ಕುಟುಂಬ ಕಳೆದ 10 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕೃಷ್ಣಪ್ಪ ಲೇಔಟ್‌ನ ನಾರಾಯಣಪ್ಪ ಬಿಲ್ಡಿಂಗ್‌ನ ಮೊದಲ ಮಹಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಜಂಬರ್ ಪ್ಲಂಬರ್ ಕೆಲಸ ಮಾಡುತ್ತಿದ್ದು, ಪತ್ನಿ ಪ್ರತಿಮಾ ಗೃಹಿನಿಯಾಗಿದ್ದರು.
ಜ.3ರಂದು ಬೆಳಗ್ಗೆ 8 ಗಂಟೆಗೆ ನಿದ್ದೆಯಿಂದ ಎದ್ದ ಪ್ರತಿಮಾ ಗ್ಯಾಸ್ ಹಚ್ಚಲು ಅಡುಗೆ ಕೊಣೆಗೆ ಹೋಗಿದ್ದಾರೆ. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಪ್ರತಿಮಾ, ಪತಿ ಅಜಂಬರ್ ಹಾಗೂ ಇಬ್ಬರು ಪುತ್ರಿಯರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಳಿಕ ಸ್ಥಳೀಯರೇ ಗಾಯಾಳುಗಳನ್ನು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಂಬರ್ ಮತ್ತು ಅವರ ಪತ್ನಿ ಪ್ರತಿಮಾ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಘಟನೆ ನಡೆದ ದಿನ ಮನೆ ಮಾಲೀಕ ಬೆಳಗ್ಗೆ 5 ಗಂಟೆಗೆ ಎದ್ದಾಗ ಅನಿಲ ಸೋರಿಕೆ ವಾಸನೆ ಗ್ರಹಿಸಿ ಎರಡನೇ ಮಹಡಿಯಲ್ಲಿರುವ ಬಾಡಿಗೆ ಮನೆಗೆ ಸೂಚಿಸಿದ್ದರು. ಆ ಮನೆಯವರು ನಮ್ಮ ಮನೆಯಲ್ಲಿ ಅನಿಲ ಸೋರಿಕೆ ಆಗಿಲ್ಲ ಪ್ರತಿಕ್ರಿಯಿಸಿ ಸುಮ್ಮನಾಗಿದ್ದರು. ಅಜಂಬರ್ ಮನೆಯಲ್ಲಿ ಅನಿಲ ಸೋರಿಕೆ ಆಗುತ್ತಿರುವುದು ಯಾರಿಗೂ ತಿಳಿದಿಲ್ಲ. ಘಟನೆಯಿಂದ ಕಟ್ಟಡದಲ್ಲಿದ್ದ ಇತರೆ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ ಎಂದು ಪೊಲೀಸರು ಹೇಳಿದರು.