ಹಾಸನ: ಲಂಬಾಣಿ ಅಥವಾ ಬಂಜಾರ ಜನಾಂಗವು ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಸಮುದಾಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾಲಾಲ್ ಅವರು ದಾವಣಗೆರೆ ಜಿಲ್ಲೆ ಸೂರಗುಂಡನ ಕೊಪ್ಪಲಿನಲ್ಲಿ ಜನಿಸಿದರು. ನಂತರ ಅವರು ಅಂಧ್ರಪ್ರದೇಶ ಮತ್ತಿತರೆಡೆ ಸಂಚರಿಸಿ ಲಂಬಾಣಿ ಅಥವಾ ಬಂಜಾರ ಹಾಗೂ ಅಲೆಮಾರಿ ಜನಾಂಗವನ್ನು ಒಟ್ಟುಗೂಡಿಸಿ ಜನಾಂಗವು ನೆಲೆನಿಂತು ಬಾಳುವಂತೆ ಮಾಡಿದ್ದು ಸಂತ ಸೇವಾಲಾಲ್ ಅವರ ಹೆಗ್ಗಳಿಕೆಯಾಗಿದೆ. ಬಂಜಾರ ಸಮುದಾಯವು ಒಗ್ಗಟಿನಿಂದ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುಲ್ಲಿ ಸಕ್ರಿಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರಮಜೀವಿಗಳು: ಅಲೆಮಾರಿ ಸಮುದಾಯದ ಪ್ರತಿಯೊಬ್ಬರು ಕೌಶಲ್ಯವಂತರಾಗಬೇಕು ಮತ್ತು ಮತ್ತೂಬ್ಬರಿಗೆ ಕಲಿಸುತ್ತಿರಬೇಕೆಂಬ ಉದ್ದೇಶವನ್ನು ಸೇವಾಲಾಲ್ ಅವರು ಹೊಂದಿದ್ದರು ಎಂದ ಅವರು, ಲಂಬಾಣಿ ಸಮುದಾಯದವರು ಕಷ್ಟ ಜೀವಿಗಳು, ಕಾಡಿನಿಂದ ಆಯ್ದು ತಂದ ಕಟ್ಟಿಗೆ ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು, ಕ್ರಮೇಣ ಸಮುದಾಯವು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿ: ಹಾಸನ ತಾಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ ಅವರು ಮಾತನಾಡಿ, ಲಂಬಾಣಿ ಸಮುದಾಯದ ಜನರು ಶಿಕ್ಷಿತರು, ಸುಸಂಸ್ಕೃತರಾಗಬೇಕು ಎಂಬುದು ಸಂತ ಸೇವಾಲಾಲರ ಆಶಯವಾಗಿತ್ತು. ಹಿಂದುಳಿದ ಜನಾಂಗದವರ ಏಳ್ಗೆಗಾಗಿ ಸರ್ಕಾರ ಸಾಕಷ್ಟು ಅನುದಾನ, ಯೋಜನಾ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿ ವೇತನದಂತಹ ಸವಲತ್ತುಗಳನ್ನು ನೀಡುತ್ತಿದೆ ಹಾಗಾಗಿ ಲಂಬಾಣಿ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಸೇವಾಲಾಲರನ್ನು ಸ್ಮರಿಸಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕೊಸನೂರಿನ ಉಪನ್ಯಾಸಕರಾದ ಡಾ. ವಸಂತನಾಯ್ಕ ಅವರು ಮಾತನಾಡಿ, ಸಂತ ಸೇವಾಲಾಲ್ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ಸ್ಮರಣೆ ನಮ್ಮ ಕರ್ತವ್ಯವಾಗಿದೆ. ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಿಸಿದರೆ, ಬೆವರಿನಿಂದ ಸ್ನಾನ ಮಾಡಿದವರು ಇತಿಹಾಸವನ್ನೇ ಬದಲಾಯಿಸುತ್ತಾರೆಂಬುದು ಸೇವಾಲಾಲರ ಅಭಿಮತವಾಗಿತ್ತು.
ಹಾಗಾಗಿ ಮಾತೇ ಸಾಧನೆಯಾಗದೆ ಸಮುದಾಯದ ಜನರ ಸಾಧನೆ ಮನೆ ಮಾತಾಗುವಂತೆ ಶ್ರಮಿಸಬೇಕೆಂಕು ಎಂದು ಹೇಳಿದರು. ರಾಗ, ತಾಳಗಳ ಸಮ್ಮಿಲವಿನರುವ ಗಾನದಂತೆ ಭಾರತ ದೇಶ ಸರ್ವ ಧರ್ಮಗಳ, ಹಲವು ಸಂಸ್ಕೃತಿಗಳ ಶ್ರೀಮಂತ ರಾಷ್ಟ್ರವಾಗಿದೆ. ಇಂತಹ ದೇಶದ ಭಾಗವಾಗಿರುವುದಕ್ಕೆ ಲಂಬಾಣಿ ಸಮುದಾಯ ಹೆಮ್ಮೆ ಪಡುತ್ತದೆ. ಸಮುದಾಯದ ಹೆಸರಿನಲ್ಲಿ ಗುರುತಿಸಿಕೊಳ್ಳಲು ಲಂಬಾಣಿ ಸಮಾಜದವರು ಅಂಜಿಕೊಳ್ಳಬಾರದು ಎಂದು ಕವಿಮಾತು ಹೇಳಿದರು.
ಇದೇ ವೇಳೆಯಲ್ಲಿ ಲಂಬಾಣಿ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್ ಕುಂಬಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬಂಜಾರ ಸಮಾಜದ ಮುಖಂಡರುಗಳಾದ ಬಿ.ವಿ.ರಾಜನಾಯ್ಕ, ಪುಟ್ಟನಾಯ್ಕ, ಗಂಗಾಧರನಾಯ್ಕ, ಸ್ವಾತಂತ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.