Advertisement

ದೇಶದ ಸಂಸ್ಕೃತಿ ಗೌರವಿಸಿದರೆ ಮಾತ್ರ ಸಂವಿಧಾನ ಗೌರವಿಸಿದಂತೆ

06:15 AM Jan 27, 2018 | Team Udayavani |

ಬೆಂಗಳೂರು: ರಾಷ್ಟ್ರಧ್ವಜಕ್ಕೆ ಸೆಲ್ಯೂಟ್‌ ಹೊಡೆದು ಬಾಯಿಮಾತಿನಲ್ಲಿ ಸಂವಿಧಾನ ಒಪ್ಪಿಕೊಂಡರೆ ಸಾಲದು. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಗೌರವಿಸಿದರೆ ಮಾತ್ರ ಸಂವಿಧಾನವನ್ನು ಮನಸಾರೆ ಒಪ್ಪಿಕೊಂಡು ಗೌರವಿಸಿದಂತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇಂತಹ ಅನೇಕ ವಿಷಯಗಳನ್ನು ನಾನು ಹೇಳಲು ಹೋದರೆ ವಾಸ್ತವ ಅರ್ಥಮಾಡಿಕೊಳ್ಳದ ಕೆಲವರಿಗೆ ಬಣ್ಣದ ಕನ್ನಡಕ ಕೊಟ್ಟಂತೆ ಆಗುತ್ತದೆ. ಅದರ ಮೂಲಕ ಅವರದೇ ದೃಷ್ಟಿಯಲ್ಲಿ ಜಗತ್ತನ್ನು ನೋಡಲು ಆರಂಭಿಸುತ್ತಾರೆ ಎಂದು ತಮ್ಮ ಟೀಕಾಕಾರರ ಬಗ್ಗೆ ಕಿಡಿ ಕಾರಿದರು.

ತಮ್ಮ ಮಾತಿನ ಉದ್ದಕ್ಕೂ ಪರೋಕ್ಷವಾಗಿ ಟೀಕಾಕಾರರಿಗೆ ತಿರುಗೇಟು ನೀಡಿದ ಅನಂತಕುಮಾರ್‌ ಹೆಗಡೆ, ಬ್ರಿಟಿಷರ ಕಾನೂನು ಹೋಗಲಾಡಿಸಿ ನಮ್ಮ ಕಾನೂನು ಅನುಷ್ಠಾನಗೊಂಡ ದಿನವೇ ಗಣರಾಜ್ಯೋತ್ಸವ. ಆ ದಿನ ರಾಷ್ಟ್ರಧ್ವಜಕ್ಕೆ
ನಮಿಸಿ, ಬಾಯಿ ಮಾತಿನಲ್ಲಿ ಸಂವಿಧಾನ ಒಪ್ಪಿಕೊಂಡರೆ ಸಂವಿಧಾನಕ್ಕೆ ಗೌರವ ನೀಡಿದಂತೆ ಆಗುವುದಿಲ್ಲ. ನಮ್ಮ ಮಣ್ಣಿನ ಸಂಸ್ಕೃತಿ ಗೌರವಿಸುವುದು ಕೂಡ ಮುಖ್ಯ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ಬೇರೆ ಕಡೆ ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದರು. 

ನಮ್ಮ ಮಣ್ಣಿನ ಸಂಸ್ಕೃತಿ ಗೌರವಿಸದವರು ಸಂವಿಧಾನದ ಬಗ್ಗೆ ಮಾತನಾಡುವುದೇ ವ್ಯರ್ಥ. ಇದ್ದದ್ದನ್ನು ಇದ್ದಂತೆ ಹೇಳಿದರೆ ಕೆಲವರಿಗೆ ಆಗುವುದಿಲ್ಲ. ನಾನು ಏನೇ ಹೇಳಿದರೂ ಅದಕ್ಕೆ ವಿವಾದದ ಬಣ್ಣ ಕಟ್ಟುತ್ತಾರೆ. ಕೆಲವರಿಗೆ ಆಗುವುದಿಲ್ಲ ಎಂದು ಅವರನ್ನು ಸಮಾಧಾನಪಡಿಸುವುದಕ್ಕೆ ಮುಂದಾಗಬಾರದು. ಕಂಡದ್ದನ್ನು ಕಂಡಂತೆ ಹೇಳಬೇಕೇ ಹೊರತು ಸುತ್ತಿ ಬಳಸಿ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. 

ಸ್ವಾತಂತ್ರ್ಯ ಸಿಕ್ಕಿದಾಗ ನಮಗೆ ಒಂದು ಚೌಕಟ್ಟು ಸಿಕ್ಕಿರಲಿಲ್ಲ. ಸ್ವಾತಂತ್ರ್ಯ ನಮಗೇ ಬಂತು ಎಂದು ರಾಜಮನೆತನಗಳವರು ಭಾವಿಸಿದರು. ಹೀಗಾಗಿ ಆ ಚೌಕಟ್ಟು ಒದಗಿಸಲು ಸಂವಿಧಾನ ರಚಿಸಿ ಜಾರಿಗೊಳಿಸಲಾಯಿತು. ಹಾಗೆಂದು ಕೇವಲ ಸಂವಿಧಾನ ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯೇ ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಜತೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಒಪ್ಪಿಕೊಳ್ಳುವುದೇ ನಿಜವಾದ ರಾಷ್ಟ್ರೀಯತೆ ಎಂದು ಅಭಿಪ್ರಾಯಪಟ್ಟರು.

Advertisement

ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌, ಶಾಸಕ ಡಾ.ಸಿ.ಎನ್‌.
ಅಶ್ವತ್ಥನಾರಾಯಣ ಮತ್ತಿತರ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next