ಕೆ.ಆರ್.ಪುರ: ಮಹಾಶಿವರಾತ್ರಿ ಪ್ರಯುಕ್ತ ಕೆ.ಆರ್.ಪುರದ ವಿವಿಧ ಶಿವನ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿನ ವ್ಯಂಗಯ್ಯನಕೆರೆ ಸಮೀಪವಿರುವ ಇತಿಹಾಸ ಪ್ರಸಿದ್ಧ ಮಹಾಬಲೇಶ್ವರ್ ಹಾಗೂ ಹೊರಮಾವಿನ ಕಾಶಿವಿಶ್ವೇಶ್ವರ ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಭೂತಿ ಅಭಿಷೇಕಗಳು ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಮುಂಜಾನೆಯಿಂದಲೇ ಭಕ್ತರು ಆಗಮಿಸಿ ಶಿವನ ದರ್ಶನ ಪಡೆದು ಆತನ ಕೃಪೆಗೆ ಪಾತ್ರರಾದರು.
51 ಗ್ರಾಮದೇವತೆಗಳ ಪ್ರತಿಷ್ಠಾಪನೆ: ಹೊರಮಾವಿನ ಕಾಶಿವಿಶ್ವೇಶ್ವರ ದೇವಸ್ಥಾನದಲ್ಲಿ ದಶಮುಖ ಶಿವ, ರಂಗನಾಥ, ಅನಂತಪದ್ಮನಾಭ, ಅರ್ಧನಾರೇಶ್ವರ, ಮಹಾಸದಾಶಿವ, ವೆಂಕಟೇಶ್ವರ ಸ್ವಾಮಿ ಹಾಗು ಆದಿ ದೇವತೆಗಳಾದ ಎಲ್ಲಮ್ಮ ಕಾಟೇರೆಮ್ಮ, ದೊಡ್ಡಮ್ಮ, ಸಪ್ಪಲಮ್ಮ ಸೇರರಿದಂತೆ 51ಕ್ಕೂ ಹೆಚ್ಚು ಗ್ರಾಮದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಆಗಮಿಸಿ ದೇವರ ದರ್ಶನ ಪಡೆದರು. ದೇವರ ದರ್ಶನ ಪಡೆಯಲು ಭಕ್ತಾಧಿಗಳು ಬಿಸಿಲನ್ನು ಲೆಕ್ಕಿಸದೇ ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನಕ್ಕೆ ಬಂದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ಜೊತೆ ಪಾನಕ, ಮಜ್ಜಿಗೆ ವಿನಿಯೋಗ ಮಾಡಲಾಯಿತು.