ಮೈಸೂರು: ಇತ್ತೀಚಿನ ದಿನಗಳಲ್ಲಿ ವಿಮರ್ಶಕರು ತಮ್ಮ ಇಷ್ಟಕ್ಕೆ ಬಂದಂತೆ ಬರೆಯುವುದು ಕೊಲೆಗಡುಕತನದ ವಿಮರ್ಶೆಯಾಗಿದೆ ಎಂದು ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಹೇಮಗಂಗಾ ಕಾವ್ಯ ಬಳಗದ ವತಿಯಿಂದ ನಗರದ ಎಂಜಿನಿಯರ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಸಮ್ಮೇಳನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವಿಮರ್ಶಕರು ವ್ಯಕ್ತಿ ವ್ಯಕ್ತಿಗಳ ನಡುವೆ ಕಬ್ಬಿಣದ ಪರದೆಗಳನ್ನು ನಿರ್ಮಿಸಿದ್ದು, ಜತೆಗೆ ಪಕ್ಷಪಾತಿಗಳೂ ಆಗಿದ್ದಾರೆ ಎಂದರು.
ಈ ಕಾರಣಕ್ಕಾಗಿಯೇ ಗೌಡ ಅಂತ ಹೆಸರು ತಿಳಿದ ಕೂಡಲೇ ವಿಮರ್ಶಕರ ಕಣ್ಣಿಗೆ ಅವರನ್ನು ತಮಗೆ ಇಷ್ಟ ಬಂದ ಹಾಗೇ ವಿಮರ್ಶಿಸುತ್ತಾರೆ. ಇದು ವಿಮರ್ಶಕರ ಕೊಲೆಗಡುಕತನದ ವಿಮರ್ಶೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಬಟ್ಟೆಗೆ ತನ್ನದೇ ಆದ ಸಂಸ್ಕೃತಿ, ಗೌರವವಿದೆ. ಆದರೆ ತುಂಡು ತುಂಡು ಬಟ್ಟೆಗಳನ್ನು ಹಾಕಿಕೊಂಡವರನ್ನು ನೋಡಿದರೆ ನನಗೆ ವಾಕರಿಕೆ ಬರುತ್ತದೆ. ಇನ್ನೂ ನಮ್ಮ ಕಾಲದಲ್ಲಿ ಬೆಳಗ್ಗೆ ಎದ್ದಾಗ ತಾಯಿ, ತಂದೆ, ಪೋಷಕರನ್ನು ದೇವರ ರೂಪದಲ್ಲಿ ಕಂಡು ಅವರ ಕಾಲಿಗೆ ನಮಸ್ಕಾರ ಮಾಡುವ ಸಂಸ್ಕೃತಿ ಇತ್ತು. ಇದಾದ ನಂತರ ದೇವರ ಕೋಣೆಗೆ ಹೋಗಿ ದೇವರಿಗೆ ಕೈಮುಗಿಯುತ್ತಿದ್ದೆವು. ಇಂದು ದೇವರೇ ಇಲ್ಲ ಅಂತ ಹೇಳುವವರಿಗೆ ನಾವು ಏನೆಂದು ಹೇಳ್ಳೋಣ ಎಂದು ಪ್ರಶ್ನಿಸಿದರು.
ಯಾವುದೇ ಬರಹಗಾರರಿಗೆ ನಮ್ಮ ಮೂಲ ಸಂಸ್ಕೃತಿಯ ಬಗ್ಗೆ ಅಭಿರುಚಿ ಇರಬೇಕು. ಬರೆಯುವ ಮೊದಲು ಕನ್ನಡ, ಭಾರತಾಂಬೆ, ಭಾರತೀಯ ವಾಸನೆಯೊಂದಿಗೆ ಬರೆಯುವುದನ್ನು ಅರಿತುಕೊಳ್ಳಬೇಕಿದೆ. ಸಿನಿಮಾ ಸಾಹಿತ್ಯ ಬರೆಯುವುದು ಸುಲಭದ ಮಾತಲ್ಲ, ಸಿನಿಮಾ ಕಾವ್ಯವನ್ನು ಬರೆಯಬೇಕು ಎಂದರೆ ಪಂಪ, ಪೊನ್ನ, ರನ್ನ ಸಹಿತವಾದ ಕನ್ನಡ ಸಾಹಿತ್ಯದ ಪರಿಚಯವಿರಬೇಕು. ಇದೇ ಕಾರಣಕ್ಕಾಗಿಯೇ ನಾನು ಸಾವಿರಾರು ಹಾಡುಗಳನ್ನು ಬರೆದಿದ್ದರೂ, ಹೊಸ ಹಾಡನ್ನು ಬರೆಯಲು ಭಯ ಪಡುತ್ತೇನೆ ಎಂದರು.
ಇನ್ನು ಕನ್ನಡದ ಕಾವ್ಯವನ್ನು ಅಥವಾ ಸಿನಿಮಾ ಕಾವ್ಯವನ್ನು ರಚಿಸಲು ಸಂಸ್ಕೃತಿಯ ಅರಿವಿರಬೇಕು. ಆಗ ಮಾತ್ರವೇ ಕಾವ್ಯಗಳನ್ನು ರಚಿಸುವುದಕ್ಕೆ ಭಾವರಸವಿರಲಿದ್ದು, ನಿಂಬೆಹಣ್ಣಿನಂತ ಹುಡುಗಿ ಬಂದಳು ನೋಡೋ.. ಎಂದು ಬರೆಯುವ ಸಾಹಿತ್ಯವನ್ನು ಇಷ್ಟ ಪಡುವವರಿಗೆ ನಾವು ಏನೆಂದು ಹೇಳ್ಳೋಣ.. ಹುಚ್ಚವೆಂಕಟ್‌ನ ಹುಚ್ಚು ತನಕ್ಕೆ ಏನೆಂದು ಹೇಳ್ಳೋಣ ಎಂದು ಪ್ರಶ್ನಿಸಿದರು.
ಸಮಾಜ ಸೇವಕರಾದ ರಘುರಾಂ ವಾಜಪೇಯಿ, ಡಾ.ಭೇರ್ಯ ರಾಮಕುಮಾರ್, ಸಾಹಿತಿ ಡಾ.ಜಯಪ್ಪ ಹೊನ್ನಾಳಿ, ಜಾnನೋದಯ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಶ್ರೀಕಂಠ ಶರ್ಮಾ, ಸಂಸ್ಕೃತಿ ಪೋಷಕರಾದ ಎ.ಹೇಮಗಂಗಾ, ಸಾಹಿತಿ ಮಹದೇವನಾಯಕ ಕೂಡ್ಲಾಪು ಇತರರು ಇದ್ದರು.