ಕನ್ನಡದಲ್ಲಿ ಈ ವಾರ “ಅಮೃತ ಘಳಿಗೆ’ ಚಿತ್ರ ತೆರೆಗೆ ಬರುತ್ತಿದೆ. “ಅಮೃತ ಘಳಿಗೆ’ ಹೆಸರು ಕೇಳುತ್ತಿದ್ದಂತೆ, ಕನ್ನಡ ಚಿತ್ರ ಪ್ರೇಮಿಗಳಿಗೆ ಮೊದಲು ನೆನಪಾಗೋದು 1984 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿ, ತೆರೆಕಂಡ ಚಿತ್ರ. ಆದರೆ ನಾವು ಹೇಳಲು ಹೊರಟಿರುವ “ಅಮೃತ ಘಳಿಗೆ’ ಚಿತ್ರಕ್ಕೂ, ಪುಟ್ಟಣ್ಣ ಕಣಗಾಲರ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕಥೆಗೆ ಹೊಂದಾಣಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಅದೇ ಶೀರ್ಷಿಕೆಯನ್ನು ಮತ್ತೆ ಬಳಸಿಕೊಂಡಿದ್ದೇವೆ ಎನ್ನುವುದು ಚಿತ್ರದ ಶೀರ್ಷಿಕೆಯ ಬಗ್ಗೆ ಚಿತ್ರತಂಡ ಮೊದಲಿಗೆ ನೀಡುವ ಸಮರ್ಥನೆ.
ಅಂದಹಾಗೆ, “ಅಮೃತ ಘಳಿಗೆ’ ಚಿತ್ರದಲ್ಲಿ ರಾಜಶೇಖರ್, ನೀತು ಶೆಟ್ಟಿ, ಸಂಹಿತಾ ವಿನ್ಯಾ, ಹಿರಿಯ ನಟ ದತ್ತಣ್ಣ, ಶೃಂಗೇರಿ ರಾಮಣ್ಣ ಹೀಗೆ ಹಲವು ಕಲಾವಿದರ ದೊಡ್ಡ ತಾರಾಗಣವಿದೆ. ಪರಿಸ್ಥಿತಿಗಳು ಬದಲಾದಂತೆ ಸಂಬಂಧಗಳು ಹೇಗೆ ಬದಲಾಗುತ್ತದೆ. ಅದರ ಪರಿಣಾಮಗಳು ಏನು ಎನ್ನುವುದು ಚಿತ್ರದ ಕಥೆಯ ಎಳೆ. “ಹೆತ್ತವರ ಮಾತು ಮೀರಿ ಮದುವೆಯಾಗುವ ಕಥಾ ನಾಯಕ, ಆ ಬಳಿಕ ಒಂದು ಇಕ್ಕಟ್ಟಿಗೆ ಸಿಲುಕಿ, ನಂತರ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಎನ್ನುವುದು ಚಿತ್ರ ತೆರೆದಿಡುತ್ತದೆ. ಚಿತ್ರದಲ್ಲಿ ಪ್ರತಿ ಪಾತ್ರಗಳು, ದೃಶ್ಯಗಳು ನಮ್ಮ ನಡುವೆ ನಡೆಯುವ ಸನ್ನಿವೇಶಗಳನ್ನೇ ಪ್ರತಿಬಿಂಬಿಸುವಂತೆ ಇರುತ್ತವೆ. ಇಡೀ ಚಿತ್ರದ ದೃಶ್ಯಗಳನ್ನು ಶೃಂಗೇರಿ, ಹೊರನಾಡು, ಉಡುಪಿ, ಮಲ್ಪೆ ಹೀಗೆ ಕರಾವಳಿ ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ’ ಎನ್ನುತ್ತದೆ ಚಿತ್ರತಂಡ.
ಚಿತ್ರದಲ್ಲಿ ನಟಿ ನೀತು ಶೆಟ್ಟಿ, ಅಮೃತಾ ಎನ್ನುವ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕು ಎನ್ನುವಾಗ ಎದುರಾಗುವ ಅನಿರೀಕ್ಷಿತ ಬೆಳವಣಿಗೆಗಳಿಂದ ಏನೇನಾಗುತ್ತದೆ ಎನ್ನುವುದು ಚಿತ್ರ. ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರವಾಗಿದ್ದರೂ, ಕಥೆಗೆ ತಿರುವು ಕೊಡುತ್ತದೆ’ ಎನ್ನುತ್ತಾರೆ ನೀತು. ಉಳಿದಂತೆ ನಟ ರಾಜಶೇಖರ್ ಸಾಫ್ಟ್ವೇರ್ ಕಂಪೆನಿಯಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ ನಾಯಕನ ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಇನ್ನೊಬ್ಬ ನಾಯಕಿ ಸಂಹಿತಾ ವಿನ್ಯಾ ಮಧ್ಯಮ ಕುಟುಂಬದ ಮಲೆನಾಡಿನ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಕಾರ್ತಿಕ್ ವೆಂಕಟೇಶ್ ಸಾಹಿತ್ಯ-ಸಂಗೀತ ನೀಡಿದ್ದಾರೆ. ಚಿತ್ರದ ದೃಶ್ಯಗಳನ್ನು ಅರುಣ್ ಕುಮಾರ್ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ರಾಜಶೇಖರ್ ಎಸ್.ಎ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಶೋಕ್ ಕೆ. ಕಡಬ “ಅಮೃತ ಘಳಿಗೆ’ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಒಂದು ಕಲಾತ್ಮಕ ಕಥೆಯನ್ನು ಒಂದಷ್ಟು ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ತೆರೆಗೆ ತರಲು ಹೊರಟಿದ್ದೇವೆ. ಇಂದಿನ ಪ್ರೇಕ್ಷಕರು ಬಯಸುವ ಮನರಂಜನೆ, ಸಂದೇಶ ಎರಡೂ “ಅಮೃತ ಘಳಿಗೆ’ ಯಲ್ಲಿವೆ ಎನ್ನುತ್ತದೆ ಚಿತ್ರತಂಡ. ಸದ್ಯ ತೆರೆಗೆ ಬರಲು ಅಂತಿಮ ಹಂತದ ತಯಾರಿ ಮಾಡಿಕೊಳ್ಳುತ್ತಿರುವ “ಅಮೃತ ಘಳಿಗೆ’ ಇಂದು ರಾಜ್ಯಾದ್ಯಂತ ಸುಮಾರು ನಲವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ.