Advertisement

ಕ್ರಿಕೆಟ್‌ ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ

01:21 PM Apr 05, 2022 | Team Udayavani |

ರಾಯಚೂರು: ಸುಮಾರು ಎರಡು ದಶಕಗಳಿಂದ ನನೆಗುದಿಗೆ ಬಿದ್ದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಈ ಬಾರಿಯಾದರೂ ಪೂರ್ಣಗೊಳ್ಳುವುದೇ ಎಂಬ ನಿರೀಕ್ಷೆ ಮೂಡಿದೆ. ಈಗಾಗಲೇ ಕೆಲವು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಮುಗಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಇಚ್ಛಾಶಕ್ತಿ ತೋರಬೇಕಿದೆ.

Advertisement

ರಾಯಚೂರು-ಮಂತ್ರಾಲಯ ರಸ್ತೆ ಮಧ್ಯದಲ್ಲಿ ಸುಮಾರು 12 ಎಕರೆ ಸ್ಥಳದಲ್ಲಿ ಈ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ನಗರದಿಂದ ಸುಮಾರು 10 ಕಿಮೀ ದೂರದಲ್ಲಿದೆ. ಎಂ.ಎಸ್‌.ಪಾಟೀಲ್‌ ಸಚಿವರಾಗಿದ್ದಾಗ 1999ನೇ ಇಸವಿಯಲ್ಲಿ ಇದಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ ಈವರೆಗೂ ಕ್ರೀಡಾಂಗಣ ಮಾತ್ರ ಪರಿಪೂರ್ಣತೆ ಕಂಡಿಲ್ಲ.

ಈಗಾಗಲೇ ಸುಮಾರು ಮೂರು ಕೋಟಿಗೂ ಅಧಿಕ ವೆಚ್ಚದಲ್ಲಿ ಕ್ರೀಡಾಂಗಣದ ಅನೇಕ ಕಾಮಗಾರಿ ಮಾಡಲಾಗಿದೆ. ಕ್ರೀಡಾಂಗಣ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಅಂಡರ್‌ ಗ್ರೌಂಡ್‌ ವ್ಯವಸ್ಥೆ, ಸ್ಲಿಂಕರ್‌ ಅಳವಡಿಕೆ, ಮೂರು ಬೋರ್‌ವೆಲ್‌ ವ್ಯವಸ್ಥೆ ಸೇರಿದಂತೆ ಕೆಲವೊಂದು ಕಾಮಗಾರಿ ಮುಗಿದಿವೆ. ಆದರೆ ಪ್ರಮುಖ ಕೆಲಸಗಳೇ ಬಾಕಿ ಉಳಿದಿದ್ದು, ಕ್ರೀಡಾಕೂಟ ಆಯೋಜನೆಗೆ ಅಲಭ್ಯವಾಗಿದೆ.

ಇದೊಂದು ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣವಾಗಿದ್ದು, ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಮಾಡಬೇಕಿದೆ. 2 ವರ್ಷದ ಹಿಂದೆ ಕರ್ನಾಟಕ ಕ್ರಿಕೆಟ್‌ ಸಂಸ್ಥೆ 2ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಕೋವಿಡ್‌ ಕಾರಣಕ್ಕೆ ಆ ಹಣ ಬಳಸಲಾಗಿಲ್ಲ. ಈಗ ಕಾಮಗಾರಿ ಪುನಾರಂಭದ ಚರ್ಚೆ ಶುರುವಾಗಿದ್ದು, ಮುಂದಿನ ವಾರದಲ್ಲಿ ಇಂಜಿನಿಯರ್‌ ತಂಡ ಭೇಟಿ ಮಾಡುವ ನಿರೀಕ್ಷೆ ಇದೆ.

ಒಂದೂವರೆ ಕೋಟಿ ರೂ. ಕೆಲಸ

Advertisement

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕರೂಪದ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮುಂದಾಗಿದೆ. ರಾಯಚೂರಿನಲ್ಲೂ ಎಲ್ಲ ಸೌಲಭ್ಯಗಳಿಂದ ಕೂಡಿದ ಕ್ರೀಡಾಂಗಣ ನಿರ್ಮಿಸಲಿ ಎಂಬುದು ಕ್ರೀಡಾಪಟುಗಳ ಒತ್ತಾಯವಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸಂಸ್ಥೆ ಇನ್ನೂ ಒಂದೂವರೆ ಕೋಟಿ ರೂ.ಗಿಂತ ಅಧಿಕ ವ್ಯಯ ಮಾಡಲು ಸಿದ್ಧವಿದೆ ಎಂದು ತಿಳಿಸಿದೆ. ಅದರಲ್ಲಿ ಮುಖ್ಯವಾಗಿ ಹುಲ್ಲಿನ ನೆಲಹಾಸು, ಟೆರಫಿಕ್‌ ಗ್ರೌಂಡ್‌, ಏಕರೂಪದ ಪೆವಿಲಿಯನ್‌, ವಿಶ್ರಾಂತಿ ಕೊಠಡಿಗಳು, ಗ್ಯಾಲರಿ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸಬೇಕಿದೆ.

1.75 ಕೋಟಿ ರೂ.ಲಭ್ಯ

ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಎಫ್‌ಡಿ ಖಾತೆಯಲ್ಲಿ 1.75 ಕೋಟಿ ರೂ. ಲಭ್ಯವಿದೆ. ಈ ಹಿಂದೆ ನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿ ನಡೆದಾಗ ಅದರಿಂದ ಸಂಗ್ರಹಗೊಂಡ ಹಣಕ್ಕೆ ಬಡ್ಡಿ ಸೇರಿ 1.75 ರೂ. ಖಾತೆಯಲ್ಲಿದೆ. ಆದರೆ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಹಣವನ್ನು ಬಿಸಿಸಿಐ ಸಹಯೋಗದಲ್ಲಿ ಕೆಎಸ್‌ಸಿಎ ನೀಡಲಿದ್ದು, ನಿಮ್ಮ ಹಣ ಬಳಸುವುದು ಬೇಡ ಎನ್ನುತ್ತಿದ್ದಾರೆ.

ಈಚೆಗೆ ಕೆಎಸ್‌ಸಿಎ ಕಾರ್ಯದರ್ಶಿಗಳನ್ನು ಭೇಟಿಯಾಗಿ ಕ್ರೀಡಾಂಗಣ ಕುರಿತು ಚರ್ಚಿಸಲಾಗಿದೆ. ಮುಂದಿನ ವಾರವೇ ಇಂಜಿನಿಯರ್‌ಗಳನ್ನು ಕಳುಹಿಸಿ ವರದಿ ಆದಷ್ಟು ಬೇಗ ಕಾಮಗಾರಿ ಆರಂಭಿಸುವ ವಿಚಾರ ವ್ಯಕ್ತಪಡಿಸಿದ್ದಾರೆ. ಅನುದಾನ ಎಷ್ಟು ಬೇಕಾದರೂ ನೀಡಲು ತಿಳಿಸಿದ್ದು, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವರ್ಷಾಂತ್ಯಕ್ಕೆ ಕೆಲಸ ಮುಗಿಸುವ ನಿರೀಕ್ಷೆಯಲ್ಲಿದ್ದೇವೆ. -ಶರಣರೆಡ್ಡಿ, ಮುಖ್ಯಸ್ಥ, ಕ್ರೀಡಾಂಗಣ ಸಮಿತಿ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next