Advertisement

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

12:57 PM Dec 02, 2024 | Team Udayavani |

ನಿಷ್ಪಕ್ಷಪಾತ ಹಾಗೂ ನ್ಯಾಯಯುತ ತನಿಖೆ ನಡೆಸಲು ತನಿಖಾ ಪ್ರಾಧಿಕಾರಗಳನ್ನು ಸರಕಾರಗಳು ರಚಿಸುತ್ತಿ ರುವುದು ಸರಿಯಷ್ಟೇ! ಸತ್ಯಶೋಧನೆಗಾಗಿ ನಿಯೋಜಿಸುವ ಈ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ ಈಗ ಅಪೇಕ್ಷಿತ ಮಟ್ಟದಲ್ಲಿ ಇಲ್ಲವೆಂಬ ಶಂಕೆ ಎಲ್ಲ ವಲಯದಲ್ಲಿ ಕಾಣುತ್ತದೆ. ಕಳೆದ ಕೆಲವು ದಶಕಗಳಿಂದ ಈ ತನಿಖಾ ಪ್ರಾಧಿಕಾರಗಳ ರಚನೆ, ಕಾರ್ಯದಕ್ಷತೆ, ವಿಶ್ವಾಸಾರ್ಹತೆ ಎಲ್ಲವೂ ಪ್ರಶ್ನಾರ್ಹವಾಗಿವೆ. ಆಡಳಿತಾರೂಢ ಪಕ್ಷಗಳು ತಮ್ಮ ಹುಳುಕು, ಅಕ್ರಮಗಳನ್ನು ಮುಚ್ಚಿಡಲು ಅಥವಾ ವಿರೋಧಿಗಳನ್ನು ಮೌನವಾಗಿಸಲು ಈ ತನಿಖಾ ಪ್ರಾಧಿಕಾರಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಲೇ ಬಂದಿರುವುದು ಇಂದು-ನಿನ್ನೆಯ ಬೆಳವಣಿಗೆಯಲ್ಲ. ಇದರಿಂದಾಗಿ ತನಿಖಾ ಪ್ರಾಧಿಕಾರಗಳ ಬಗೆಗೆ ಜನರು ಭ್ರಮನಿರಸನಗೊಳ್ಳುವಂತಾಗಿದೆ.

Advertisement

ವಿಚಿತ್ರವೆಂದರೆ ಆಡಳಿತದಲ್ಲಿರುವ ರಾಜಕೀಯ ಪಕ್ಷ ತನಿಖಾ ಪ್ರಾಧಿಕಾರಗಳ ದಕ್ಷತೆಯನ್ನು ಸಮರ್ಥಿ ಸಿಕೊಳ್ಳುತ್ತದೆ. ಆಡಳಿತದಲ್ಲಿ ಇಲ್ಲದ ರಾಜಕೀಯ ಪಕ್ಷಗಳು ಅಪನಂಬಿಕೆ ವ್ಯಕ್ತಪಡಿಸುತ್ತವೆ. ಅಧಿಕಾರ ಬದ ಲಾವಣೆ ಯಾಗುತ್ತಲೇ ಸಮರ್ಥನೆಗಳು ಹಾಗೂ ದೂರುವಿಕೆ ಅದಲು ಬದಲು ಆಗುತ್ತದೆ. ಇದು ಭಾರತದ ರಾಜ ಕಾರಣದ ವಿಚಿತ್ರ ವಿದ್ಯಮಾನ. ಹಾಗಾದರೆ ಈ ಪ್ರಾಧಿ ಕಾರಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕಾನೂ ನುರೀತ್ಯಾ ರಚಿಸಲ್ಪಟ್ಟವುಗಳಲ್ಲವೇ! ಜನರ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣಗಳೇನು ಎಂಬ ಮಾಹಿತಿ ಸಾರ್ವ ಜನಿಕರಿಗೆ ತಿಳಿದಿರುವುದು ಉತ್ತಮ. ಈ ನೆಲೆಯಲ್ಲಿ ಈ ಪ್ರಾಧಿಕಾರಗಳ ರಚನೆ, ಕಾರ್ಯವಿಧಾನ, ನೇಮಕಾತಿ ಇತ್ಯಾದಿಗಳ ವಿಚಾರ ಪ್ರಸ್ತುತವೆನಿಸುತ್ತದೆ.

ಭಾರತೀಯ ಸಂವಿಧಾನದ ಏಳನೇ ಶೆಡ್ನೂಲ್‌ನಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಆಡಳಿತಕ್ಕೆ ಸಂಬಂಧಿಸಿ, ವಿಷಯಗಳು ಹಾಗೂ ಕಾರ್ಯ ವ್ಯಾಪ್ತಿ ಯನ್ನು ಪಟ್ಟಿ ಮಾಡಲಾಗಿದೆ. ಇಲ್ಲಿ ಮೂರು ಪಟ್ಟಿ (Lists) ಗಳಿವೆ. ಒಂದನೇ ಪಟ್ಟಿಯಲ್ಲಿ ಕೇಂದ್ರದ ಆಡಳಿತಕ್ಕೆ ಒಳಪಟ್ಟ ವಿಷಯಗಳ ನಮೂದು ಇದೆ. ಎರಡನೇ ಪಟ್ಟಿಯಲ್ಲಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೇಳಲಾಗಿದೆ. ಮೂರನೇ ಪಟ್ಟಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೂ ವ್ಯಾಪ್ತಿ ಇರುವ ವಿಷಯಗಳು. ಉದಾ: ಆರೋಗ್ಯ, ಶಿಕ್ಷಣ ಇತ್ಯಾದಿ ವಿಷಯಗಳ ನಮೂದು ಇದೆ. ಪರಂತು ಈ ಸಾಮಾನ್ಯ ವಿಷಯಗಳ (Common Subjects) ನಿರ್ವಹಣೆಗೆ ಸಂಬಂಧಿಸಿ ಸಮಸ್ಯೆ ಯಾ ಘರ್ಷಣೆ ತಲೆದೋರದಂತೆ ಸಮನ್ವಯತೆ ಸಾಧಿಸಲು ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರ ಹಾಗೂ ಜವಾಬ್ದಾರಿ ನೀಡುವುದರ ಮೂಲಕ ಕೇಂದ್ರದ ಪಾರಮ್ಯವನ್ನು ಎತ್ತಿ ಹಿಡಿಯಲಾಗಿದೆ. ಮುಂದುವರಿದು ಈ ವಿಷಯಗಳ ಆಡಳಿತಕ್ಕೆ ಸಂಬಂಧಿಸಿ ಅಗತ್ಯ ಕಂಡಲ್ಲಿ ತನಿಖೆ ಮಾಡಿ ಕ್ರಮಕೈಗೊಳ್ಳುವ ಬಗ್ಗೆ ತನಿಖಾ ಪ್ರಾಧಿಕಾರಗಳನ್ನು ರಚಿಸಲು Commission of enquiry Act 1952 ಪ್ರಕಾರ ಕೇಂದ್ರ ಹಾಗೂ ರಾಜ್ಯಗಳಿಗೆ ಪ್ರತ್‌ಪ್ರತ್ಯೇಕ ಅಧಿಕಾರ ನೀಡಲಾಗಿದೆ.

ಮೇಲೆ ಪ್ರಸ್ತಾವಿಸಿದ ಕಾಯಿದೆಯನ್ವಯ ರಚಿತವಾದ ಸಂಸ್ಥೆಗಳು ಸ್ವತಂತ್ರ ಪ್ರಾಧಿಕಾರಗಳಾಗಿರುತ್ತವೆ. ಅರ್ಥಾತ್‌ ಈ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನಿನಂತೆ ಕಾರ್ಯನಿರ್ವಹಿಸಲು ಸ್ವತಂತ್ರ ಹಾಗೂ ಜವಾಬ್ದಾರಿ ಹೊಂದಿರುತ್ತವೆ. ಒಮ್ಮೆ ಸಂಸ್ಥೆ ರಚಿಸಲ್ಪಟ್ಟು ಕಾರ್ಯನಿರ್ವಹಿಸುವಾಗ, ರಚಿಸಿದ ಸರಕಾರಕ್ಕೂ ಅಥವಾ ಸಚಿವ ಸಂಸದರಿಗೂ, ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ನ್ಯಾಯಾಲಯದಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ. ಈ ಸಂಸ್ಥೆಗಳ ಮೂಲ ಉದ್ದೇಶವೇ, ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆ ಮಾಡಿ ಸರಕಾರಕ್ಕೆ ವರದಿ ಒಪ್ಪಿಸುವುದು. ಈ ನಿಯಮಾವಳಿಗಳಂತೆ ಕೇಂದ್ರದಲ್ಲಿ ಸಿಬಿಐ (Central Bureau of Investigation) ಎಂಬ ತನಿಖಾ ಸಂಸ್ಥೆ ಇದೆ. ಈ ಸಂಸ್ಥೆ ದೇಶವ್ಯಾಪಿ ಕಾರ್ಯಾಚರಿಸಲು ಅಧಿಕಾರ ಹೊಂದಿರುತ್ತದೆ. ಆದರೆ ಈ ರಾಜ್ಯಗಳ ಒಪ್ಪಿಗೆ ಅಥವಾ ಬೇಡಿಕೆ ಇದ್ದರೆ ಮಾತ್ರ, ಅಥವಾ ಉಚ್ಚ ನ್ಯಾಯಾಲಯಗಳ ನಿರ್ದೇಶನವಿದ್ದಲ್ಲಿ ತನಿಖೆ ಕೈಗೊಳ್ಳಬಹುದಾಗಿದೆ. ಹಾಗೆ ಕರ್ನಾಟಕದಲ್ಲಿ ವಿಜಿಲೆನ್ಸ್‌ ಕಮಿಷನ್‌ ಎಂಬ ಸ್ವತಂತ್ರ ತನಿಖಾ ಸಂಸ್ಥೆ ಇತ್ತು. ಸರಕಾರ ಅದನ್ನು ಬರ್ಖಾಸ್ತುಗೊಳಿಸಿ 1984ರಲ್ಲಿ ಲೋಕಾಯುಕ್ತವೆಂಬ ಪ್ರಾಧಿಕಾರವನ್ನು ರಚನೆ ಮಾಡಿದೆ.

ಈ ತನಿಖಾ ಪ್ರಾಧಿಕಾರಗಳ ಮುಖ್ಯಸ್ಥರನ್ನಾಗಿ ನಿವೃತ್ತ ನ್ಯಾಯಾಧೀಶರನ್ನು, ಅಧಿಕಾರಿಗಳನ್ನಾಗಿ ಐಎಎಸ್‌, ಐಪಿಎಸ್‌ ಇತ್ಯಾದಿ ಭಾರತೀಯ ಸೇವಾ ಮೂಲದವರನ್ನು ಹಾಗೂ ಪೂರಕ ಸಿಬಂದಿಯನ್ನಾಗಿ ವಿವಿಧ ಇಲಾಖೆಗಳಿಂದ ಅವರವರುಗಳ ಶುದ್ಧ ಪೂರ್ವ ಇತಿಹಾಸ (Andecedemts) ಪರಿಗಣಿಸಿ ನೇಮಕ ಮಾಡಲಾಗುವುದು. ಈ ಸಂಸ್ಥೆಗಳ ಉದ್ದೇಶ ಫ‌ಲಪ್ರದವಾಗುವುದು ಸಂಸ್ಥೆಗೆ ನೇಮಕಗೊಂಡ ಅಧಿಕಾರಿಗಳ ದಕ್ಷತೆಗನುಸಾರ. ದಕ್ಷತೆ ಎಂದರೆ ಕಾರ್ಯಕೌಶಲ ಹಾಗೂ ಪ್ರಾಮಾಣಿಕತೆಯ ಸಂಯೋಜನೆ.

Advertisement

ಹಾಗಾಗಿ ಈ ಸಂಸ್ಥೆಗಳಿಗೆ ನೇಮಕಾತಿ ಮಾಡುವ ಕಾಲಕ್ಕೆ ಸರಕಾರ, ಯಾವ ಒತ್ತಡಕ್ಕೂ ಮಣಿಯದೆ ನಿರ್ಭಿಡೆಯಿಂದ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸತಕ್ಕವರನ್ನೇ ನೇಮಕ ಮಾಡಬೇಕೆಂಬುದು ಸಂವಿಧಾನದ ಆಶಯ. ಆದರೆ ಈಗ ಈ ಸ್ವತಂತ್ರ ಪ್ರಾಧಿಕಾರಗಳ ಕಾರ್ಯನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಸಾರ್ವಜನಿಕರ ಗಂಭೀರ ಚಿಂತನೆಗೆ ಕಾರಣವಾಗಿದೆ.

ಪ್ರಜಾಸತ್ತೆಯ ಮೌಲ್ಯ ಕಾಪಾಡಲು ಈ ತನಿಖಾ ಪ್ರಾಧಿಕಾರಗಳು ಸಹಕಾರಿ. ಈ ಸಂಸ್ಥೆಗಳ ಕಾರ್ಯದಕ್ಷತೆ ಹೆಚ್ಚಿಸಲು ಅವುಗಳನ್ನು ನಡೆಸತಕ್ಕ ಅಧಿಕಾರಿಗಳ ಅರ್ಹತೆಯೂ ಆ ಮಟ್ಟದಲ್ಲಿ ಇರಬೇಕು. ಸರಕಾರ ಈ ಪ್ರಾಧಿಕಾರಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ದಕ್ಷತೆಯುಳ್ಳವರನ್ನೇ ಆಯ್ಕೆ ಮಾಡಬೇಕು. ಹಾಗೆ ಮಾಡಬೇಕಾದರೆ ಆಡಳಿತವನ್ನು ನಡೆಸತಕ್ಕವರಿಗೂ ಆ ಪ್ರಜ್ಞೆ ಇರಬೇಕು ಹಾಗೂ ಕರ್ತವ್ಯವೆಂದೇ ಪಾಲಿಸತಕ್ಕದ್ದು. ಆದರೆ ಇತ್ತೀಚೆಗಿನ ವಿದ್ಯಮಾನಗಳನ್ನು ನೋಡಿದರೆ ಅದೊಂದು ಪುನರ್ವಸತಿ ಪ್ರಕ್ರಿಯೆ ಎಂಬ ಹಾಗೆ ಕಾಣಿಸುತ್ತದೆ. ಸರಕಾರ ಇನ್ನಾದರೂ ಈ ಸ್ವತಂತ್ರ ಪ್ರಾಧಿಕಾರಗಳ ನೇಮಕಾತಿಗೆ ವಿಶಿಷ್ಟ ಕ್ರಮ ಅನುಸರಿಸಬೇಕು. ತನ್ಮೂಲಕ ಪ್ರಾಧಿಕಾರಗಳ ದಕ್ಷತೆ ಹೆಚ್ಚಿಸುವ ಕ್ರಮಕ್ಕೆ ಮುಂದಾಗಬೇಕು. ಹಾಗೆ ನೇಮಕಗೊಂಡ ವ್ಯಕ್ತಿಗಳು ಕೂಡ ಪ್ರಾಮಾಣಿಕವಾಗಿ, ನಿರ್ಭಿಡೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡುವುದರ ಮೂಲಕ ಸಾರ್ವಜನಿಕರ ನಂಬಿಕೆ ಹೆಚ್ಚಿಸುವ ಕೆಲಸ ಮಾಡಲಿ ಎಂಬುದು ಹಾರೈಕೆ.

ವಿಶೇಷ ನೇಮಕಾತಿ ವ್ಯವಸ್ಥೆ ಅಗತ್ಯ

ಸಂವಿಧಾನದ ನಿಯಮಾವಳಿಗಳಿಗನುಸಾರ ಸರಕಾರದಿಂದ ರಚಿಸಲ್ಪಡುವ ಈ ತನಿಖಾ ಪ್ರಾಧಿಕಾರಗಳು ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿರುತ್ತವೆ. ಇಂತಹ ತನಿಖಾ ಪ್ರಾಧಿಕಾರಗಳಿಗೆ ಅಧಿಕಾರಿಗಳು ಮತ್ತು ಸಿಬಂದಿಯನ್ನು ನೇಮಕ ಮಾಡುವ ಅಧಿಕಾರವನ್ನು ಸರಕಾರ ಹೊಂದಿದೆಯಾದರೂ ಆ ಬಳಿಕ ಈ ಪ್ರಾಧಿಕಾರಗಳ ಕಾರ್ಯನಿರ್ವಹಣೆಯಲ್ಲಿ ಸರಕಾರ ಹಸ್ತಕ್ಷೇಪ ನಡೆಸುವಂತಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ತನಿಖಾ ಪ್ರಾಧಿಕಾರಗಳಿಗೆ ನೇಮಕಗೊಂಡ ಅಧಿಕಾರಿಗಳ ಪ್ರಾಮಾಣಿಕತೆ ಮತ್ತು ದಕ್ಷತೆಯ ಬಗೆಗೇ ಅನುಮಾನಗಳು ಜನರನ್ನು ಕಾಡತೊಡಗಿದ್ದು, ಇಂಥ ಪರಿಸ್ಥಿತಿಯಲ್ಲಿ ಈ ತನಿಖಾ ಪ್ರಾಧಿಕಾರಗಳು ನೀಡುವ ವರದಿಗಳು ಎಷ್ಟು ನಿಷ್ಪಕ್ಷವಾಗಿರುತ್ತವೆ ಎಂಬುದು ಯಕ್ಷಪ್ರಶ್ನೆಯೇ ಸರಿ. ಹೀಗಾಗಿ ಈ ತನಿಖಾ ಪ್ರಾಧಿಕಾರಗಳ ಬಗೆಗೆ ಜನರಲ್ಲಿ ಮತ್ತೆ ವಿಶ್ವಾಸಾರ್ಹತೆ ಮೂಡಿಸಲು ಈ ಪ್ರಾಧಿಕಾರಗಳ ನೇಮಕಾತಿಗೆ ಒಂದು ವಿಶೇಷ ವ್ಯವಸ್ಥೆ ಅಥವಾ ನಿಯಮವನ್ನು ರೂಪಿಸಿ, ಜಾರಿಗೆ ತರುವ ಅಗತ್ಯವಿದೆ.

ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next