Advertisement

ಬಿರುಕುಬಿಟ್ಟ ಕೊಠಡಿ: ಜಗಲಿಯಲೇ ಪಾಠ!

11:26 AM Dec 14, 2017 | |

ಉಪ್ಪಿನಂಗಡಿ: ಲಭ್ಯವಿರುವ ನಾಲ್ಕು ಕೊಠಡಿಗಳಲ್ಲಿ ಎರಡು ಕುಸಿಯುವ ಭೀತಿಯಲ್ಲಿವೆ. ಇನ್ನೆರಡು ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲು ಜಾಗ ಸಾಲದೆ ವಿದ್ಯಾರ್ಥಿಗಳು ಶಾಲೆಯ ಜಗಲಿಯಲ್ಲೇ ಕುಳಿತು ಪಾಠ ಕೇಳುವ ದುಃಸ್ಥಿತಿ ಇಲ್ಲಿನದು!

Advertisement

ತಾಲೂಕಿನ ಉಪ್ಪಿನಂಗಡಿ ವ್ಯಾಪ್ತಿಯ ಮಠ ಹಿರ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೊಠಡಿ ದುಃಸ್ಥಿತಿಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದರಿಂದ ಹೆತ್ತವರಿಗೆ ಮಕ್ಕಳ ಸುರಕ್ಷತೆಯ ಭೀತಿ ಎದುರಾಗಿದ್ದು, ಶಾಲೆಗೆ ಕಳುಹಿಸಲು ಆತಂಕ ಪಡುತ್ತಿದ್ದಾರೆ.

ಮಠ ಹಿರ್ತಡ್ಕ ಶಾಲೆ
ಒಂದರಿಂದ ಏಳನೇ ತರಗತಿ ತನಕ ಕ್ಲಾಸ್‌ರೂಂ ಹೊಂದಿರುವ ಈ ಶಾಲೆಯಲ್ಲಿ ಒಟ್ಟು 86 ವಿದ್ಯಾರ್ಥಿಗಳು ಇದ್ದಾರೆ. 46 ವರ್ಷಗಳ ಇತಿಹಾಸ ಇರುವ ಕೊಪ್ಪಳ, ಹಿರ್ತಡ್ಕ, ಕೆರೆಮೂಲೆ ಪ್ರದೇಶದಿಂದ ಈ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಬರುತ್ತಾರೆ.

ಇಲ್ಲಿ ಏಳು ತರಗತಿಗಳಿವೆ. ಒಂದರಿಂದ 3ನೇ ತರಗತಿ ತನಕ ಒಂದು ಕೊಠಡಿಯಲ್ಲಿ ನಲಿ-ಕಲಿ ತರಗತಿ ಇದೆ. 4, 5, 6, 7ನೇ ತರಗತಿಗೆ ನಾಲ್ಕು ಕೊಠಡಿ ಇದ್ದರೂ, ಅದರಲ್ಲಿ ಎರಡು ಕೊಠಡಿ ಹಾಳಾಗಿವೆ. ಪ್ರತಿದಿನ ಒಂದು ತರಗತಿಯ ವಿದ್ಯಾರ್ಥಿಗಳನ್ನು ಜಗಲಿಯಲ್ಲಿ ಕೂರಿಸಿ ಪಾಠ ಮಾಡುತ್ತಾರೆ. ಹಾಗಾಗಿ ನಾಲ್ಕು ತರಗತಿಯವರು ದಿನದ ಒಂದು ತಾಸು ಹೊರಗೆ ಪಾಠ ಕೇಳಬೇಕಾದ ದುಃಸ್ಥಿತಿ ಇಲ್ಲಿನದು.

ಹೊಸ ಕಟ್ಟಡ ಬೇಕು
ಈಗಿರುವ ಹಳೆ ಕಟ್ಟಡ ದುರಸ್ತಿ ಕಷ್ಟ. ಅದರ ಬದಲಾಗಿ ಹೊಸ ಕೊಠಡಿಯೇ ಇಲ್ಲಿನ ಸಮಸ್ಯೆಗೆ ಪರಿಹಾರ. ಪ್ರತ್ಯೇಕ ಕೊಠಡಿ ನಿರ್ಮಿಸಲು ಪೋಷಕರ ಸಭೆ ಕರೆಯಲಾಗಿತ್ತು. ಧನ ಸಹಾಯ ಸಂಗ್ರಹಿಸಿ, ಶಾಲೆಯ ಹಿಂಬದಿಯ ಗುಡ್ಡ ಪ್ರದೇಶವನ್ನು ಸಮತಟ್ಟು ಮಾಡಲಾಗಿದೆ. ಶಾಸಕಿ ಶಕುಂತಳಾ ಟಿ. ಶೆಟ್ಟಿ ತಮ್ಮ ನಿಧಿಯಿಂದ 7 ಲಕ್ಷ ರೂ. ಮಂಜೂರುಗೊಳಿಸಿದ್ದು, ಆ ಅನುದಾನದಲ್ಲಿ ಇಲ್ಲಿ ಪ್ರತ್ಯೇಕ ಎರಡು ಹೊಸ ಕೊಠಡಿ ನಿರ್ಮಿಸುವ ಪ್ರಸ್ತಾಪ ಇದೆ. 

Advertisement

ಅದು ಇನ್ನಷ್ಟೇ ಕಾರ್ಯಗತಗೊಳ್ಳಬೇಕಿದೆ. ಆದರೆ ಬಿರುಕು ಬಿಟ್ಟ ಕಟ್ಟಡ ದುರಸ್ತಿ ಅಥವಾ ಅದಕ್ಕೆ ಪರ್ಯಾಯವಾಗಿ ಬೇರೆ ಕಟ್ಟಡ ಕಟ್ಟುವ ಪ್ರಸ್ತಾವ ಬಂದಿಲ್ಲ. ಶಾಲೆಯಲ್ಲಿ ಇರುವ ಐದು ಕೊಠಡಿಗಳಲ್ಲಿ ಒಂದು ಶಿಕ್ಷಕರಿಗೆ ಮೀಸ ಲಾಗಿದ್ದರೆ, ಉಳಿದ ನಾಲ್ಕರಲ್ಲಿ ಎರಡು ಪ್ರಯೋಜನಕ್ಕೆ ಸಿಕ್ಕಿಲ್ಲ. ಉಳಿದ ಎರಡು ಬಳಕೆ ಸಿಕ್ಕರೂ, ಸಾಲುತ್ತಿಲ್ಲ. ಜಶಾಸಕರ ಪ್ರಸ್ತಾಪದ ಎರಡು ಕೊಠಡಿಗಳ ಜತೆಗೆ ಬಿರುಕು ಬಿಟ್ಟ ಕಟ್ಟಡಕ್ಕೆ ಪರಿಹಾರವಾಗಿ ಇನ್ನೆರಡು ಕೊಠಡಿಗಳು ನಿರ್ಮಿಸಬೇಕು ಅನ್ನುವುದು ಇಲ್ಲಿನ ಬೇಡಿಕೆ.

ಹೆತ್ತವರಿಗೆ ಆತಂಕ
ಗುಣಮಟ್ಟದ ಶಿಕ್ಷಣದ ಬಗ್ಗೆ ಸರಕಾರವೇನೋ ಘೋಷಣೆ ಹೊರಡಿಸುತ್ತದೆ. ಆದರೆ ಘೋಷಣೆ ಕಡತಕ್ಕಷ್ಟೇ ಸೀಮಿತ ಅನ್ನುವುದಕ್ಕೆ ಇದು ನಿದರ್ಶನ. ಅರ್ಧ ಶತಮಾನೋತ್ಸವದ ಸಂಭ್ರಮದ ಸನಿಹದಲ್ಲಿರುವ ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಗಳು ಕಾಳಜಿ ತೋರುತ್ತಿಲ್ಲ. ಶಾಲಾ ಕಟ್ಟಡದ ದುಃಸ್ಥಿತಿಯಿಂದ ಹೆತ್ತವರಿಗೂ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ಇತ್ತ ಶಿಕ್ಷಕರಿಗೆ ಕುಸಿದ ಕೊಠಡಿಯೊಳಗೆ ಕುಳಿತು ಪಾಠ ಮಾಡಲು ಅಳುಕು ಇದೆ. ಇಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ಇಬ್ಬರೂ ಅಪಾಯ ಇದ್ದು, ಜಗಲಿಯಲ್ಲಿ ಪಾಠ ಮಾಡುತ್ತಿದ್ದಾರೆ. 

ಶೀಘ್ರದಲ್ಲೇ ನಿರ್ಮಾಣ ಕಾರ್ಯ
ಮಕ್ಕಳ ಶಿಕ್ಷಣದ ತರಗತಿಯ ಸಮಸ್ಯೆ ಬಗ್ಗೆ ಈಗಾಗಲೇ ಶಾಲಾ ಮುಖ್ಯ ಶಿಕ್ಷಕರು ನನ್ನ ಗಮನಕ್ಕೆ ತಂದಿದ್ದಾರೆ. ಕೊಠಡಿಗಳ ಸಮಸ್ಯೆ ತತ್‌ಕ್ಷಣಕ್ಕೆ ಬಗೆಹರಿಸಲು ಶಾಲಾ ಕಚೇರಿಯನ್ನು ಉಪಯೋಗಿಸಿಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ. ಅಲ್ಲದೇ, ಪುತ್ತೂರು ಶಾಸಕಿ ಟಿ. ಶಕುಂತಳಾ ಶೆಟ್ಟಿ ಅವರು 7 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದು, ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭಿಸಲಾಗುವುದು. 
ಸುಕನ್ಯಾ, ಪುತ್ತೂರು ತಾ| ಕ್ಷೇತ್ರ ಶಿಕ್ಷಣಾಧಿಕಾರಿಗಳು

ಹೊಸ ಕಟ್ಟಡಕ್ಕೆ ಮನವಿ
ವರ್ಷದ ಹಿಂದೆ ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ಶಾಲೆಯ ಮೂಲಕ ಶಾಸಕರ ಗಮನಕ್ಕೆ ತಂದಿದ್ದು, ಅವರು 7 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಅದರಲ್ಲಿ ಎರಡು ಹೊಸ ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ಅನುದಾನ ಲೋಕೋಪಯೋಗಿ ಇಲಾಖೆ ಹಂತದಲ್ಲಿದೆ. ಇನ್ನು ಬಿರುಕು ಬಿಟ್ಟಿರುವ ಎರಡು ಕೊಠಡಿ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ವರದಿ ಸಲ್ಲಿಸಲಾಗಿದೆ.
ನಿರ್ಮಲಾ
ಮುಖ್ಯ ಶಿಕ್ಷಕಿ , ಹಿರ್ತಡ್ಕ ಶಾಲೆ

ತಾತ್ಕಾಲಿಕ ಪರಿಹಾರ
ಕೊಠಡಿ ಬಿರುಕು ಬಿಟ್ಟಿರುವುದು ನಿಜ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕ ನೆಲೆಯಲ್ಲಿ ಶಾಲೆಯ ಹೊರ ಜಗಲಿಯಲ್ಲಿ ಪಾಠ ಪ್ರವಚನ ಮುಂದುವರಿಸಲಾಗಿದೆ. ಕೊಠಡಿ ಕೊರತೆ ಎಂಬ ಕಾರಣಕ್ಕೆ ಶಾಲೆ ಮುಚ್ಚಲು ಸಾಧ್ಯವಿಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ.
ಆದಂ ಕೆರೆಮೂಲೆ
   ಅಧ್ಯಕ್ಷರು, ಎಸ್‌ಡಿಎಂಸಿ, ಹಿರ್ತಡ್ಕ ಶಾಲೆ 

 ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next