Advertisement

ದೇಶಕ್ಕೆ ಮಾದರಿಯಾಗುತ್ತಿದೆ ಬೆಂಗಳೂರಿನ ಕೋವಿಡ್ ಹೋರಾಟ

07:34 AM Jun 03, 2020 | mahesh |

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಹೆಜ್ಜೆಯಿಡುತ್ತಿರುವ ನಗರಿಗಳಲ್ಲಿ ಬೆಂಗಳೂರಿಗೆ ನಂಬರ್‌ 1 ಸ್ಥಾನ ನೀಡಿತ್ತು. ಒಂದು ಕೋಟಿಗೂ ಅಧಿಕ ಜನಸಂಖ್ಯೆಯಿರುವ ಬೆಂಗಳೂರು ಕೋವಿಡ್ ನಿಯಂತ್ರಣದಲ್ಲಿ ಅದ್ಭುತ ಕೆಲಸ ಮಾಡಿರುವುದು ನಿರ್ವಿವಾದ. ಈ ಪ್ರಯತ್ನದಲ್ಲಿ ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆಯ ಅಪಾರ ಪರಿಶ್ರಮವಿದೆ. ಆದರೆ, ಈಗ ಲಾಕ್‌ಡೌನ್‌ ನಿರ್ಬಂಧಗಳು ಸಡಿಲವಾಗುತ್ತಿರುವುದರಿಂದಾಗಿ ರಾಜಧಾನಿಯಷ್ಟೇ ಅಲ್ಲದೇ, ರಾಜ್ಯಾದ್ಯಂತ ಬೃಹತ್‌ ಸವಾಲೂ ಎದುರಾಗಿದೆ.

Advertisement

ಕ್ಲಸ್ಟರ್‌ ನಿಯಂತ್ರಣಕ್ಕೆ ಮೈಸೂರು-ಬೆಂಗಳೂರು ಮಾದರಿ ಇಂದು ಅತಿಹೆಚ್ಚು ಕೋವಿಡ್‌-19 ಪ್ರಕರಣಗಳಿಂದ ಬಳಲುತ್ತಿರುವ ನಗರಗಳು ಆರಂಭಿಕ ದಿನಗಳಲ್ಲಿ ಕ್ಲಸ್ಟರ್‌ಗಳನ್ನು ನಿಯಂತ್ರಿಸಲಾಗದೇ ಇದ್ದಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿವೆ. ಉದಾಹರಣೆಗೆ, ಮುಂಬೈನಲ್ಲಿ ಧಾರಾವಿ, ಚೆನ್ನೈನಲ್ಲಿ ಕೊಯಂಬೆಡು ಮಾರುಕಟ್ಟೆ, ದೆಹಲಿಯಲ್ಲಿ ತಬ್ಲೀ ಜಮಾತ್‌ ಸಮಾವೇಶ…ಇತ್ಯಾದಿ. ಈ ಕ್ಲಸ್ಟರ್‌ಗಳನ್ನು ನಿಯಂತ್ರಿಸಲು ಸೋತದ್ದಕ್ಕಾಗಿ, ಸ್ಥಳೀಯ ಆಡಳಿತಗಳಿಗೆ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಬಹಳ ಹಿನ್ನಡೆಯಾಯಿತು. ಆದರೆ ಇತ್ತ ಕರ್ನಾಟಕವು ಇಂಥ ಕ್ಲಸ್ಟರ್‌ಗಳನ್ನು ಗುರುತಿಸಿ, ರೋಗ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಹೆಜ್ಜೆಯಿಟ್ಟಿತು. ಉದಾಹರಣೆಗೆ, ಕರ್ನಾಟಕದಲ್ಲಿ ಮೊದಲು ಪತ್ತೆಯಾದ ದೊಡ್ಡ ಕ್ಲಸ್ಟರ್‌ ಎಂದರೆ, ಮೈಸೂರಿನ ಫಾರ್ಮಾ ಕಂಪೆನಿ, ಅಲ್ಲಿ 74 ಪ್ರಕರಣಗಳು ಪತ್ತೆಯಾದವು. ತಕ್ಷಣವೇ ಇಡೀ ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಾಯಿತು. ಸಂಪರ್ಕಗಳ ಪತ್ತೆಹಚ್ಚುವಿಕೆ, ಕ್ವಾರಂಟೈನ್‌ ಕ್ರಮಗಳಿಂದಾಗಿ ಕೇವಲ 56 ದಿನಗಳಲ್ಲಿ ಇಡೀ ಜಿಲ್ಲೆ ಕೋವಿಡ್‌-19 ಮುಕ್ತವೆಂದು ಘೋಷಣೆಯಾಯಿತು. ರಾಜಧಾನಿ ಬೆಂಗಳೂರಿನಲ್ಲೂ ಕ್ಲಸ್ಟರ್‌ ನಿಯಂತ್ರಣದಲ್ಲಿ ಶ್ಲಾಘನೀಯ ಕ್ರಮಗಳನ್ನು ಕೈಗೊಳ್ಳಲಾಯಿತು. ಪಾದರಾಯನಪುರವನ್ನು ಹೈ ರಿಸ್ಕ್ ಪ್ರದೇಶವೆಂದು ಗುರುತಿಸಿ, ಎಪ್ರಿಲ್‌ 10ರಂದು ಬಿಬಿಎಂಪಿ ಆ ಪ್ರದೇಶವನ್ನು ಸೀಲ್‌ ಮಾಡಿತು. ಈ ಪ್ರದೇಶದ ಜನರಿಗೆ ನಿತ್ಯ ದಿನಸಿ ಪೂರೈಸುವುದು ಹಾಗೂ ಪರೀಕ್ಷೆಗಳನ್ನು ನಡೆಸುವಲ್ಲಿ ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಮುಖ್ಯವಾಗಿ ಪೊಲೀಸ್‌ ಇಲಾಖೆ ಬಹಳ ಪರಿಶ್ರಮಿಸಿತು. ಗಮನಾರ್ಹ ಸಂಗತಿಯೆಂದರೆ, ರಾಜಧಾನಿಯಲ್ಲಿ ಕೋವಿಡ್‌-19 ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆಯ ಪ್ರಯತ್ನವೂ ಪ್ರಮುಖ ಪಾತ್ರವಹಿಸಿದೆ ಎಂದು ತಜ್ಞರು ಹೇಳುತ್ತಾರೆ.

ಫ‌ಲ ನೀಡಿದ ಆರಂಭಿಕ ಪರಿಶ್ರಮ
ಬೆಂಗಳೂರಿನಲ್ಲಿ ಕೋವಿಡ್‌-19ರ ಮೊದಲ ಪ್ರಕರಣ ಪತ್ತೆಯಾದದ್ದು ಮಾರ್ಚ್‌ 8 ರಂದು. ನಂತರದ ಕೆಲವೇ ದಿನಗಳಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಜತೆಗೂಡಿ, ಆ ಸೋಂಕಿತ ಅಡ್ಡಾಡಿದ ಜಾಗಗಳು, ಭೇಟಿಯಾದ ಜನರ ಮಾಹಿತಿಯನ್ನೆಲ್ಲ ತ್ವರಿತವಾಗಿ ಕಲೆಹಾಕಿ ಆ ರೋಗಿಯ ಸಂಪರ್ಕಕ್ಕೆ ಬಂದ, 2,666ಜನರನ್ನು( ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್) ಪತ್ತೆಹಚ್ಚಿದರು. “”ಕೆಲವು ಪ್ರಕರಣಗಳಲ್ಲಂತೂ ನಾವು, ರೋಗಿಯ ಸಂಪರ್ಕಕ್ಕೆ ತಿಂಗಳ ಹಿಂದೆ ಬಂದ ವ್ಯಕ್ತಿಗಳನ್ನೆಲ್ಲ ಪತ್ತೆಹಚ್ಚಿ ಪರೀಕ್ಷಿಸಿದ್ದೇವೆ” ಎನ್ನುತ್ತಾರೆ ಕೋವಿಡ್‌-19 ವಾರ್‌ರೂಮ್‌ನ ಅಧಿಕಾರಿಯೊಬ್ಬರು.

ತಜ್ಞರ ಸಲಹೆ ಚಾಚೂತಪ್ಪದೇ ಪಾಲಿಸುತ್ತಿದೆ ಆರೋಗ್ಯ ಇಲಾಖೆ
ಕರ್ನಾಟಕ ಸರಕಾರದ ತಜ್ಞರ ಸಮಿತಿ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌)ಯ ರಿಸರ್ಚ್‌ ಟಾಸ್ಕ್ ಫೋರ್ಸ್‌ನ ಸೋಂಕು ತಜ್ಞ ಡಾ| ಗಿರಿಧರ ಬಾಬು “ದಿ ಕ್ವಿಂಟ್‌’ ಜಾಲತಾಣದೊಂದಿಗೆ ಮಾತನಾಡುತ್ತಾ “”ಕರ್ನಾಟಕದಲ್ಲಿ ಕೋವಿಡ್‌-19 ವಿರುದ್ಧದ ಹೋರಾಟಕ್ಕೆ ಚಾಲನಾ ಶಕ್ತಿಯಾಗಿರುವುದು ಆರೋಗ್ಯ ಇಲಾಖೆ. ಒಂದೇ ಒಂದು ಸಂದರ್ಭದಲ್ಲೂ ಕೂಡ ಆರೋಗ್ಯ ಇಲಾಖೆಯವರು ನಮ್ಮ ಸಲಹೆಗಳನ್ನು ನಿರಾಕರಿಸಿಲ್ಲ. ಪರಿಣತರ ಮೇಲೆ ಆರೋಗ್ಯ ಇಲಾಖೆ ಇಡುತ್ತಿರುವ ಈ ನಂಬಿಕೆ ಬೆರಗುಗೊಳಿಸುವಂಥದ್ದು” ಎನ್ನುತ್ತಾರೆ.

ಮುಂದಿದೆ ಬೃಹತ್‌ ಸವಾಲು
ಕರ್ನಾಟಕದಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಇನ್ಮುಂದೆ ಪಾಲಿಸಲೇಬೇಕಾದ ಕ್ರಮಗಳ ಬಗ್ಗೆ ತಜ್ಞರು ನೀಡುವ ಸಲಹೆಗಳಿವು.

Advertisement

ರೋಗಲಕ್ಷಣಗಳ ವ್ಯಾಪ್ತಿಯನ್ನು ವಿಸ್ತರಿಸುವುದು: ಕೋವಿಡ್‌-19 ಲಕ್ಷಣಗಳಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆಯನ್ನೇ ಉಲ್ಲೇಖೀಸಲಾಗುತ್ತದೆ. ಆದರೆ, ಕೊರೊನಾ ಪೀಡಿತರಿಗೆ ಘ್ರಾಣಶಕ್ತಿಯಲ್ಲಿ ನಷ್ಟ(ವಾಸನೆಯ ಶಕ್ತಿ), ರುಚಿಯಲ್ಲಿ ನಷ್ಟ, ಅಶಕ್ತಿ, ಮಾಂಸಖಂಡಗಳಲ್ಲಿ ನೋವು, ಇತ್ಯಾದಿ ಲಕ್ಷಣಗಳೂ ಇರುತ್ತವೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣಗಳು ಕಾಣಿಸಿಕೊಂಡವರನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡಬೇಕು ಎನ್ನುವುದು ತಜ್ಞರ ಸಲಹೆ.
ಕ್ಲಸ್ಟರ್‌ಗಳನ್ನು ತಡೆಯುವುದು: ಇಂದು ಜಗತ್ತಿನ 80 ಪ್ರತಿಶತ ಪ್ರಕರಣಗಳು ಕ್ಲಸ್ಟರ್‌ಗಳಲ್ಲಿ ಇದ್ದ 20 ಪ್ರತಿಶತ ಜನರಿಂದಾಗಿಯೇ ಹಬ್ಬಿವೆ. ಹೀಗಾಗಿ, ಮದುವೆ, ಸಮಾವೇಷಗಳು, ಸಮಾರಂಭಗಳು, ಚಿಕ್ಕ ಕಚೇರಿಗಳಲ್ಲಿ ಹೆಚ್ಚು ಜನರು ಕೆಲಸ ಮಾಡುವುದನ್ನು ಮುಂದಿನ ಕೆಲವು ತಿಂಗಳವರೆಗೆ ಕಡ್ಡಾಯವಾಗಿ ನಿಷೇಧಿಸುವುದು.

ಸಂಪರ್ಕಗಳ ಪತ್ತೆಹಚ್ಚುವಿಕೆ+ಸೂಪರ್‌ ಸ್ಪ್ರೆಡರ್‌ಗಳ ಗುರುತಿಸುವಿಕೆ: ಕಾಂಟ್ಯಾಕ್ಟ್ ಟ್ರೇಸಿಂಗ್‌ ವೇಗವನ್ನು ಹೆಚ್ಚಿಸುವುದು ಹಾಗೂ ರೋಗಲಕ್ಷಣಗಳಿಲ್ಲದೇ ಸೋಂಕು ಹರಡುತ್ತಿರುವವರನ್ನು ತ್ವರಿತವಾಗಿ ಪತ್ತೆಹಚ್ಚಿ ಅವರನ್ನು ಕ್ವಾರಂಟೈನ್‌ ಮಾಡುವುದು ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಫ‌ಲಿತಾಂಶ ನೀಡಬಲ್ಲದು. ಅಲ್ಲದೇ, ಪರೀಕ್ಷೆಗಳ ಪ್ರಮಾಣವನ್ನೂ ಹೆಚ್ಚಿಸಬೇಕಿರುವುದು ಅಗತ್ಯ. ಪ್ರಸ್ತುತ ರಾಜ್ಯದಲ್ಲಿನ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 4802 ಪರೀಕ್ಷೆಗಳು ನಡೆಯುತ್ತಿದ್ದು, ಈ ಪ್ರಮಾಣ ದ್ವಿಗುಣವಾಗಬೇಕು ಎನ್ನುವುದು ಪರಿಣತರ ಸಲಹೆ.

ಬೆಂಗಳೂರಿನ ಗಮನಾರ್ಹ ಹೆಜ್ಜೆ
1.2 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ನಗರಿಯಲ್ಲಿ ಜೂನ್‌ 1ರ ವೇಳೆಗೆ 385 ಪ್ರಕರಣಗಳು ವರದಿಯಾದರೆ, ಈ 385 ಪ್ರಕರಣಗಳಲ್ಲಿ 237 ಜನ ಚೇತರಿಸಿಕೊಂಡಿದ್ದಾರೆ. ಇದಕ್ಕೆ ಹೋಲಿಸಿದರೆ, ಚೆನ್ನೈ ಮತ್ತು ಮುಂಬೈನಂಥ ನಗರಿಗಳಲ್ಲಿ ಇಷ್ಟು ಸೋಂಕಿತರು ಪ್ರತಿ ನಿತ್ಯ ವರದಿಯಾಗುತ್ತಿದ್ದಾರೆ…

ನಗರಿ ಪ್ರಕರಣಗಳು ಜನಸಂಖ್ಯೆ
ಮುಂಬೈ  41,099 2 ಕೋಟಿ
ದೆಹಲಿ  20,834 1.9 ಕೋಟಿ
ಚೆನ್ನೈ  15,766 1.09 ಕೋಟಿ
ಅಹಮದಾಬಾದ್‌  12,494 78 ಲಕ್ಷ
ಕೋಲ್ಕತ್ತಾ  2,179 1.49 ಕೋಟಿ
ಹೈದ್ರಾಬಾದ್‌  1,540 1 ಕೋಟಿ
ಬೆಂಗಳೂರು  385 1.23 ಕೋಟಿ
(ಜೂನ್‌-1ರ ಮಧ್ಯಾಹ್ನದ ವೇಳೆಗೆ)

Advertisement

Udayavani is now on Telegram. Click here to join our channel and stay updated with the latest news.

Next