ಬೆಂಗಳೂರು: ಮಳೆಯಿಂದಾಗಿ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳನ್ನು ಮುಚ್ಚದೆ, “ಮಳೆ ನಿಲ್ಲಲಿ’ ಎಂದು ಸಬೂಬು ಹೇಳುತ್ತಾ ಬಂದ ಬಿಬಿಎಂಪಿ ಮತ್ತು ಸರ್ಕಾರದ ಬೇಜವಾಬ್ದಾರಿಗೆ ನಗರದಲ್ಲಿ ಅಮಾಯಕ ದಂಪತಿ ಬಲಿಯಾಗಿದ್ದಾರೆ.
ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಬಳಿಯ ನಳಂದ ಟಾಕೀಸ್ ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಜೆಜೆ ನಗರದ ನಿವಾಸಿಗಳಾದ ಆಂಥೋಣಿ ಜೋಸೆಫ್ (55) ಮತ್ತು ಅವರ ಪತ್ನಿ ಸಾಗಾಯ್ ಮೇರಿ (52) ಮೃತಪಟ್ಟಿದ್ದಾರೆ. ಘಟನೆಯಲ್ಲಿ ದಂಪತಿಯ ಮೊಮ್ಮಗಳು ಅಕ್ಯೂಲಾ ಶೆರಿನ್ (6) ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತಕ್ಕೆ ರಸ್ತೆ ನಡುವಿದ್ದ ಯಮಸ್ವರೂಪಿ ಗುಂಡಿಯೇ ಕಾರಣ ಎನ್ನಲಾಗಿದೆ.
ಯಮ ವೇಗದಲ್ಲಿ ಬಂದ ಬಸ್: ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮೊಮ್ಮಗಳು ಶೆರಿನ್‌ಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ತಕ್ಷಣ ದಂಪತಿ ತಮ್ಮ ಆಕ್ಟಿವ್ ಹೋಂಡಾದಲ್ಲಿ ಮೊಮ್ಮಗಳನ್ನು ಹತ್ತಿರದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರು ರಸ್ತೆ ಮೇಲ್ಸೇತುವೆ ಮೂಲಕ ಜೆಜೆ ನಗರದ ನಿವಾಸಕ್ಕೆ ಮರಳುತ್ತಿದ್ದರು. ಈ ವೇಳೆ ನಳಂದ ಟಾಕೀಸ್ ಎದುರು ಹೋಗುವಾಗ ಮೇಲ್ಸೇತುವೆ ನಡುವೆ ದೊಡ್ಡ ಗುಂಡಿ ಕಂಡ ಆಂಥೋಣಿ ಜೋಸೆಫ್, ಸ್ಕೂಟರ್‌ನ ವೇಗ ತಗ್ಗಿಸಿದ್ದಾರೆ.
ಇದೇ ವೇಳೆ ಹಿಂದಿನಿಂದ ಸುಮಾರು 100 ಕಿ.ಮೀ. ವೇಗದಲ್ಲಿ ಬರುತ್ತಿದ್ದ ತಮಿಳುನಾಡು ಸರ್ಕಾರಿ ಸಂಸ್ಥೆಯ ಬಸ್ (ಟಿಎನ್-29, ಎನ್-2540) ಆಕ್ಟಿವ್ ಹೊಂಡಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದಂಪತಿ ರಸ್ತೆಗೆ ಬಿದ್ದಿದ್ದು, ಇಬ್ಬರ ತಲೆ ಮೇಲೂ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯ ಎಡ ಭಾಗಕ್ಕೆ ಬಿದ್ದ ಬಾಲಕಿ ಶೆರಿನ್‌ಗೆ ಸಣ್ಣ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಸ್ ಬಿಟ್ಟು ಪರಾರಿಯಾಗಿದ್ದ ಚಾಲಕ ಸೇಲಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಗುಂಡಿ ಮುಚ್ಚಿಸಿದ ಮೇಯರ್: ಮೇಲ್ಸುತ್ತುವೆ ಮೇಲೆ ಇದ್ದ ಗುಂಡಿಯಿಂದ ಘಟನೆ ನಡೆದಿದ್ದರಿಂದ ಎಚ್ಚೆತ್ತುಕೊಂಡ ಸಂಚಾರ ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ನೂತನ ಮೇಯರ್ ಸಂಪತ್‌ರಾಜ್, ಸ್ವತಃ ಮುಂದೆನಿಂತು ಕಾಂಕ್ರಿಟ್ ಹಾಕಿಸಿ ಗುಂಡಿಗಳನ್ನು ಮುಚ್ಚಿಸಿದರು.
45 ನಿಮಿಷ ತಡವಾಗಿ ಬಂದ ಪೊಲೀಸರಿಗೆ!: ತಡರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು ಪೊಲೀಸ್ ಸಹಾಯವಾಣಿ “ನಮ್ಮ-100’ಕ್ಕೆ ಕರೆ ಮಾಡಿದ್ದಾರೆ. ಸಹಾಯವಾಣಿ ಸಿಬ್ಬಂದಿ ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಅಪಘಾತ ಸ್ಥಳದಲ್ಲಿ ಸ್ಥಳೀಯರೊಬ್ಬರು ಮೃತರ ಗುರುತು ಹಿಡಿದು ಜೋಸೆಫ್ ಅವರ ಪುತ್ರಿ ಸಂಗೀತಾಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಘಟನೆ ನಡೆದು 45 ನಿಮಿಷಗಳಾದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದು, ಆ ವೇಳೆಗಾಗಲೇ ಸ್ಥಳೀಯರು ಗಾಯಗೊಂಡು ನರಳುತ್ತಿದ್ದ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಬಂದ ಪೊಲೀಸರು ಆ್ಯಂಬುಲೆನ್ಸ್ ಕರೆಸಿ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.