ಬೆಂಗಳೂರು: ಕನ್ನಡ ಸಾರಸ್ವತ ಲೋಕದಲ್ಲಿ ಅನೇಕ ಪ್ರಥಮಗಳಿಗೆ ಕಾರಣಕರ್ತರಾದ ಪ್ರೊ. ಕೆ.ಜಿ. ಕುಂದಣಗಾರರಿಗೆ ಕನ್ನಡ ಸಾಹಿತ್ಯ ಜಗತ್ತು ಮತ್ತು ಸಾಹಿತ್ಯ ಪರಿಷತ್ತು ಮೂಲೆಗುಂಪು ಮಾಡಿತು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ವಿಶ್ವಕರ್ಮ ಸಾಹಿತ್ಯ-ಕಲಾ ಅಕಾಡೆಮಿ ವತಿಯಿಂದ ಭಾನುವಾರ ಕಸಾಪದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಕೆ.ಜಿ.ಕುಂದಣಗಾರರ ಬದುಕು-ಬಹರಗಳ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಂದಣಗಾರರಿಗೆ ಸಾಹಿತ್ಯ ಕ್ಷೇತ್ರ ಹಾಗೂ ಅದರ ಪ್ರಾತಿನಿಧಿಕ ಸಂಸ್ಥೆಗಳಿಂದ ಸಿಗಬೇಕಾದಷ್ಟು ಗೌರವ ಅಥವಾ ಮನ್ನಣೆ ಸಿಕ್ಕಿಲ್ಲ.
ಉತ್ತಮ ಸಾಧನೆ ಮಾಡಿದವರಿಗೆ ಸಮಾಜ ಗುರುತಿಸುವುದು ಕಡಿಮೆ ಅನ್ನುವುದು ಬೇಸರದ ಸಂಗತಿ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಹಂಪ ನಾಗರಾಜಯ್ಯ, ಕುಂದಣಗಾರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಆರ್ಥಿಕವಾಗಿ ಪರಿಸ್ಥಿತಿ ಅಷ್ಟೊಂದು ಅನುಕೂಲಕವಾಗಿರದಿದ್ದರೂ, ಅದನ್ನು ತೋರ್ಪಡಿಸದೇ, ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡರು.
ಪ್ರಾಚೀನ ನಾಣ್ಯಗಳ ಸಂಶೋಧನೆ, ಛಂದಸ್ಸಿ ಕ್ರಮದ ಅಧ್ಯಯನ, ಪಂಪನ ಆದಿಪುರಾಣ ಮಹಾಕಾವ್ಯದ ಸಂಗ್ರಹ ಮತ್ತು ಕೊಲ್ಲಾಪುರ ಲಕ್ಷ್ಮಿ ದೇವಾಲಯ ಇತಿಹಾಸದ ಆನಾವರಣ ಸೇರಿದಂತೆ ಅನೇಕ ಕೃತಿಗಳು ಅವರ ಅಧ್ಯಯನ ಶೀಲಕ್ಕೆ ಹಿಡಿದ ಕೈಗನ್ನಡಿ ಎಂದರು. ಕಲಬುರಗಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಮ.ಗು.ಬಿರಾದಾರ್ ಮಾತನಾಡಿ, 43 ಹಳೆಗನ್ನಡ ಶಾಸನಗಳನ್ನು ಇಂಗ್ಲಿಷ್ ಭಾಷೆ ಭಾಷಾಂತರಿಸುವುದರ ಜೊತೆಗೆ ಕುಂದಣಗಾರ ಅವರು 50ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.
ಜಾನಪದಲ್ಲಿ ಪಿಎಚ್‌ಡಿ ಪಡೆಯಲು ಅವಕಾಶ ಮಾಡಿಕೊಟ್ಟು, ಜಾನಪದ ಅಕಾಡೆಮಿ ಸ್ಥಾಪನೆಗೆ ಮುಂದಾಗಿದ್ದು ಅವರ ಭಾಷಾ ಸಾಹಿತ್ಯ ನೀಡಿದ ಕೊಡುಗೆ. ಮರಾಠಿ ನೆಲದಲ್ಲಿ ಕನ್ನಡವನ್ನು ಶ್ರೀಮಂತಗೊಳಿಸಿದ ವ್ಯಕ್ತಿ ಅವರು ಎಂದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷೆ ಪ್ರೊ.ಎನ್.ವಿ.ಅಂಬಾಮಣಿಮೂರ್ತಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ಯು.ಮಂಜುನಾಥ್, ಡಾ.ವೈ.ಸಿ.ಭಾನುಮತಿ, ಪ್ರಾಧ್ಯಾಪಕ ಡಾ.ಕೆ.ಪಿ.ಈರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.