Advertisement

ಮುಂದಿನ ವಾರ ಸಮನ್ವಯ ಸಮಿತಿ ಸಭೆ

06:15 AM Nov 18, 2018 | Team Udayavani |

ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ಒತ್ತಡ ಹೆಚ್ಚಾಗುತ್ತಿದ್ದು, ಆಕಾಂಕ್ಷಿಗಳು ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಿಸುವಂತೆ ಪಟ್ಟು ಹಿಡಿದಿದ್ದಾರೆ.

Advertisement

ಶನಿವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ‌ ಸಚಿವಾಕಾಂಕ್ಷಿಗಳಾದ ಎಂ.ಬಿ.ಪಾಟೀಲ್‌, ಬಿ.ಸಿ.ಪಾಟೀಲ್‌ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.

ಉಪ ಚುನಾವಣೆಯಲ್ಲಿ  ಉತ್ತಮ ಫ‌ಲಿತಾಂಶ ಬಂದಿರುವುದರಿಂದ ಸಂಪುಟ ವಿಸ್ತರಣೆ ಮಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಿವಾಸದಲ್ಲಿ ರಾಜ್ಯ  ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ  ಈಶ್ವರ್‌ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್‌ ಸಭೆ ನಡೆಸಿ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಜತೆ ಚರ್ಚಿಸಿ  ಈ ಕುರಿತು ನಿರ್ಧಾರ ಕೈಗೊಂಡು ದಿನಾಂಕ ನಿಗದಿಪಡಿಸಿ ರಾಹುಲ್‌ಗಾಂಧಿಯವರ ಒಪ್ಪಿಗೆ ಪಡೆಯಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಅಸಮಾಧಾನ
ಈ ನಡುವೆ, ಸಂಪುಟ ವಿಸ್ತರಣೆಯಿಂದ ಸಚಿವಾಕಾಂಕ್ಷಿಗಳು ಬೇಸರಗೊಂಡಿದ್ದಾರೆ. ಇನ್ನೂ ವಿಳಂಬವಾದರೆ ಕೆಲವು ಶಾಸಕರು ಪಕ್ಷ ಬಿಡಬಹುದು. ಹತ್ತು ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಸಾಧ್ಯತೆಯಿದೆ. ಹೀಗಾಗಿ, ಮತ್ತೆ ಆಪರೇಷನ್‌ ಕಮಲ ಭೀತಿಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಸಮನ್ವಯ ಸಮಿತಿ ಸಭೆ
ಮುಂದಿನ ವಾರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನಕ್ಕೆ ಮೊದಲು ಮಾಡಬೇಕೋ ಅಥವಾ ನಂತರವೋ ಎಂಬುದು ತೀರ್ಮಾನವಾಗಲಿದೆ ಎಂದು ಹೇಳಲಾಗಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೂ ಎರಡು ಸಮನ್ವಯ ಸಮಿತಿ ನಡೆದಿದೆ.

ಡಿಕೆಶಿಗೆ ತೆಲಂಗಾಣ ಉಸ್ತುವಾರಿ
ಬಳ್ಳಾರಿ ಉಪ ಚುನಾವಣೆಯಲ್ಲಿ  ಉಸ್ತುವಾರಿ ವಹಿಸಿಕೊಂಡು ಪಕ್ಷಕ್ಕೆ ಜಯ ತಂದುಕೊಟ್ಟ ಡಿ.ಕೆ.ಶಿವಕುಮಾರ್‌ ಅವರಿಗೆ ಇದೀಗ ತೆಲಂಗಾಣ ವಿಧಾನಸಭೆ ಚುನಾವಣೆ ಉಸ್ತುವಾರಿ ವಹಿಸಲಾಗಿದೆ. ಈ ಸಂಬಂಧ ಶಿವಕುಮಾರ್‌ ಅವರಿಗೆ ಎಐಸಿಸಿಯಿಂದ ಸೂಚನೆ ನೀಡಲಾಗಿದೆ. ತೆಲಂಗಾಣದ ಕೆಲ ಕ್ಷೇತ್ರಗಳ ಮೇಲುಸ್ತುವಾರಿ ನೋಡಿಕೊಳ್ಳಲು ವರಿಷ್ಠರು ನಿರ್ದೇಶಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ತೆಲಂಗಾಣ ಪ್ರಚಾರಕ್ಕೆ ತೆರಳುವ ಸಾಧ್ಯತೆಯಿದೆ.

ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಯಾವುದೇ ಗೊಂದಲವಿಲ್ಲ.  ಈ ತಿಂಗಳ ಅಂತ್ಯದಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಗುವುದು.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನದ ಒಳಗೆ ಸಂಪುಟ ವಿಸ್ತರಣೆಯಾಗಲಿದೆ. ಯಾವ ಶಾಸಕರೂ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ.
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಸಂಪುಟ ವಿಸ್ತರಣೆ ಬಗ್ಗೆ ತಿಳಿದಿಲ್ಲ. ನನಗೆ ಸಚಿವ ಸ್ಥಾನ ಕೊಡುವುದು ಅಥವಾ ಬಿಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು.
– ಎಂ.ಬಿ.ಪಾಟೀಲ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next