Advertisement

ಕಾಯಿ ಕಾಯಿ ಗೋರಿಕಾಯಿ ಉಂಡೆಗೆ…

08:32 PM Nov 05, 2019 | Lakshmi GovindaRaju |

ಗೋರಿಕಾಯಿ, ಸಾಮಾನ್ಯವಾಗಿ ಎಲ್ಲ ಕಾಲದಲ್ಲಿ ಸಿಗುವಂಥ ತರಕಾರಿ. ಚವಳಿಕಾಯಿ ಅಂತಲೂ ಕರೆಸಿಕೊಳ್ಳುವ ಈ ತರಕಾರಿಯ ಪಲ್ಯ, ಸಾಂಬಾರು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ, ಅಧಿಕ ಕಬ್ಬಿಣಾಂಶ, ಎ ಮತ್ತು ಸಿ ಜೀವಸತ್ವ, ನಾರಿನಂಶ, ಕ್ಯಾಲ್ಸಿಯಂ ಅಂಶ ಹೊಂದಿರುವ ಗೋರಿಕಾಯಿಯನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು. ಹಾಗಾದ್ರೆ, ಯಾವ ರೂಪದಲ್ಲಿ ಅದನ್ನು ಸೇವಿಸಬಹುದು ಅಂದಿರಾ? ಇಲ್ಲಿದೆ ನೋಡಿ.

Advertisement

1. ಗೋರಿಕಾಯಿ ಹಬೆ ಉಂಡೆ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಎಳೆ ಗೋರಿಕಾಯಿ- ಒಂದು ಕಪ್‌, ಹೆಸರುಬೇಳೆ -1 ಕಪ್‌, ಕಡಲೇ ಬೇಳೆ- ಒಂದು ಚಮಚ, ತೊಗರಿಬೇಳೆ- ಒಂದು ಚಮಚ, ತೆಂಗಿನತುರಿ- ಕಾಲು ಕಪ್‌, ಶುಂಠಿ, ಒಣಮೆಣಸಿನಕಾಯಿ-4, ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕಡಲೆ ಮತ್ತು ತೊಗರಿ ಬೇಳೆಗಳನ್ನು ಚೆನ್ನಾಗಿ ತೊಳೆದು, ಅರ್ಧ ಗಂಟೆ ನೆನೆಸಿ ಇಡಿ. ಜೊತೆಗೆ, ತೆಂಗಿನತುರಿ, ಶುಂಠಿ, ಒಣ ಮೆಣಸಿನಕಾಯಿ, ಇಂಗು, ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಗೋರಿಕಾಯಿಯನ್ನು ಸೇರಿಸಿ ಚೆನ್ನಾಗಿ ಕಲೆಸಿ. ನಂತರ ಇಡ್ಲಿ ತಟ್ಟೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ಹಬೆ ಉಂಡೆ ರೆಡಿ.

2. ಗೋರಿಕಾಯಿ ಪುಡಿಪಲ್ಯ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಗೋರಿಕಾಯಿ- ಒಂದು ಕಪ್‌, ಕಡಲೆಬೇಳೆ- 1 ಕಪ್‌, ಒಣಮೆಣಸಿನಕಾಯಿ -3, ಶುಂಠಿ, ಇಂಗು,ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕಡಲೇಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಿ. ಇದರೊಂದಿಗೆ ಒಣಮೆಣಸಿನಕಾಯಿ, ಶುಂಠಿ, ಉಪ್ಪನ್ನು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ಸಾಸಿವೆ, ಉದ್ದಿನಬೇಳೆ, ಇಂಗು ಒಗ್ಗರಣೆ ಹಾಕಿ, ಹೆಚ್ಚಿದ ಗೋರಿಕಾಯಿ ಹಾಕಿ ಐದು ನಿಮಿಷ ಬಾಡಿಸಿ. ನಂತರ ರುಬ್ಬಿದ ಬೇಳೆ ಹಾಕಿ, ತುಸು ನೀರು ಚುಮುಕಿಸಿ ಚೆನ್ನಾಗಿ ಬೆರೆಸಿ, ಬಾಣಲೆ ಮುಚ್ಚಿ, ಮಧ್ಯಮ ಉರಿಯಲ್ಲಿಡಿ. ತಳ ಹಿಡಿಯದಂತಿರಲು ಆಗಾಗ ಕೈಯಾಡಿಸಿ, ಹತ್ತು ನಿಮಿಷ ಬೇಯಿಸಿ. ಈ ಪಲ್ಯವನ್ನು ಅನ್ನ, ಚಪಾತಿ ಜೊತೆ ವ್ಯಂಜನವಾಗಿ ಬಳಸಬಹುದು. ಹಾಗೆಯೇ ತಿನ್ನಲೂ ರುಚಿಯಾಗಿರುತ್ತದೆ.

Advertisement

3. ಗೋರಿಕಾಯಿ ಖಾರದ ಕಡ್ಡಿ
ಬೇಕಾಗುವ ಸಾಮಗ್ರಿ: ಗೋರಿಕಾಯಿ-15, ಕಡಲೆಹಿಟ್ಟು- 1 ಕಪ್‌, ಅಚ್ಚ ಮೆಣಸಿನ ಪುಡಿ, ಓಂ ಕಾಳುಪುಡಿ 1/2 ಚಮಚ, ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಗೋರಿಕಾಯಿಯನ್ನು ಚೆನ್ನಾಗಿ ತೊಳೆದು, ಒರೆಸಿಟ್ಟುಕೊಳ್ಳಿ. ಕಡಲೆಹಿಟ್ಟು, ಮೆಣಸಿನ ಪುಡಿ, ಓಂ ಕಾಳು, ಇಂಗು ಹಾಕಿ, ಜೊತೆಗೆ ನೀರು ಬೆರೆಸಿ ದೋಸೆಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಲು ಇಡಿ. ಎಣ್ಣೆ ಬಿಸಿಯಾಗುತ್ತಲೇ, ಗೋರಿಕಾಯಿಯನ್ನು ಒಂದೊಂದಾಗಿ ಖಾರದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ, ಕೆಂಬಣ್ಣಕ್ಕೆ ಬರುವವರೆಗೆ ಕರಿಯಿರಿ. ಸಂಜೆ ವೇಳೆ ಸ್ನ್ಯಾಕ್ಸ್‌ನಂತೆ ಸವಿಯಬಹುದಾದ ಈ ತಿನಿಸು, ಮೆಣಸಿನ ಬೋಂಡ, ಆಲೂ ಬೋಂಡಾಗಿಂತ ಆರೋಗ್ಯಕರ.

4. ಗೋರಿಕಾಯಿ ಖಟ್ಟಾ-ಮೀಠಾ
ಬೇಕಾಗುವ ಸಾಮಗ್ರಿ: ತುದಿ ತೆಗೆದ ಗೋರಿಕಾಯಿ -25, ಹುಣಸೇ ರಸ- ಒಂದು ಕಪ್‌, ಕರಗಿಸಿ ಶೋಧಿಸಿದ ಬೆಲ್ಲದ ದ್ರಾವಣ, ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ- ತಲಾ ಒಂದು ಚಮಚ, ಒಣಮೆಣಸಿನಕಾಯಿ-5, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಒಣಮೆಣಸಿನಕಾಯಿಗಳನ್ನು ಎಣ್ಣೆ ಹಾಕದೇ ಹುರಿದು ಪುಡಿ ಮಾಡಿಕೊಳ್ಳಿ. ಬಾಣಲೆಗೆ ಸಾಸಿವೆ, ಇಂಗು ಒಗ್ಗರಣೆ ಹಾಕಿ, ಗೋರಿಕಾಯಿಯನ್ನು ಗರಿಗರಿಯಾಗುವಂತೆ ಹುರಿದು, ಅದಕ್ಕೆ ಹುಣಸೇ ರಸ, ಬೆಲ್ಲದ ದ್ರಾವಣ, ಮಸಾಲೆಪುಡಿ, ಉಪ್ಪು ಸೇರಿಸಿ, ಎಲ್ಲ ಪದಾರ್ಥಗಳು ಚೆನ್ನಾಗಿ ಬೇಯುವವರೆಗೆ ಕುದಿಸಿ, ತಣಿಯಲು ಬಿಡಿ. ಸಿಹಿ-ಖಾರ ರುಚಿ ಕೊಡುವ ಈ ವ್ಯಂಜನ ಊಟ,ತಿಂಡಿ ಜೊತೆಗೆ ಸೇವಿಸಲು ಚೆನ್ನಾಗಿರುತ್ತದೆ.

* ಕೆ.ವಿ.ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next