Advertisement

ಪತ್ನಿ ಮತ್ತು ಮಕ್ಕಳಿಗೆ ವಿಷವುಣಿಸಿದ್ದ ಪೇದೆ ಜೈಲಿನಲ್ಲಿ ಆತ್ಮಹತ್ಯೆ

12:00 PM Sep 06, 2017 | Team Udayavani |

ಬೆಂಗಳೂರು: ಕಳೆದ ಮೇ ತಿಂಗಳಲ್ಲಿ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ಜೈಲು ಸೇರಿದ್ದ ಪೊಲೀಸ್‌ ಪೇದೆ ಸುಭಾಷ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಸ್ಪತ್ರೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಮಂಗಳವಾರ ಬೆಳಿಗ್ಗೆ ಜೈಲು ಆಸ್ಪತ್ರೆಯಲ್ಲಿದ್ದ ಇತರ ಕೈದಿಗಳು ಉಪಹಾರಕ್ಕೆ  ಹೋಗಿದ್ದ ಸಂಧರ್ಭದಲ್ಲಿ  ಒಬ್ಬನೇ ಉಳಿದುಕೊಂಡಿದ್ದ ಸುಭಾಷ್‌,  ಆಸ್ಪತ್ರೆಯ ಕಿಟಕಿಯ ಸರಳುಗಳಿಗೆ ತನ್ನ ಲುಂಗಿಯಿಂದ ನೇಣುಬಿಗಿದುಕೊಂಡಿದ್ದಾನೆ. ಇದನ್ನು ನೋಡಿದ ಕೂಡಲೇ ಜೈಲು ಅಧಿಕಾರಿಗಳು ಆತನನ್ನು  ಜೈಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಅದರೆ, ಮಾರ್ಗ ಮಧ್ಯೆಯೇ ಸುಭಾಷ್‌ ಮೃತಪಟ್ಟಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

 ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ  ಸಿಎಆರ್‌ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಭಾಷ್‌, ಸಂಪಿಗೆಹಳ್ಳಿಯ ಪೊಲೀಸ್‌ ವಸತಿ ಗೃಹದಲ್ಲಿ ಮೇ 23 ರಂದು ರಾತ್ರಿ ಪತ್ನಿ ವೀಣಾ (28), ಮಕ್ಕಳಾದ ಮಾನ್ವಿ (3) ಹಾಗೂ ಮಗ ಪೃಥ್ವಿ (1) ಅವರಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಈ ದುರ್ಘ‌ಟನೆಯಲ್ಲಿ ಪತ್ನಿ ಹಾಗೂ ಮಕ್ಕಳು ಮೃತಪಟ್ಟು ಸುಭಾಷ್‌ ಬದುಕುಳಿದಿದ್ದ.  

ಕೆಲ ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದ ಸುಭಾಷ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿಕೊಡಲಾಗಿತ್ತು. ವಿಚಾರಣಾಧೀನ ಕೈದಿಯಾಗಿದ್ದ ಸುಭಾಷ್‌ ಪತ್ನಿ ಮತ್ತು ಮಕ್ಕಳು ಸಾವನ್ನಪ್ಪಿದ್ದರಿಂದ ಸಾಕಷ್ಟು ನೊಂದಿದ್ದ. ಮಾನಸಿಕ ಖನ್ನತೆಗೆ ಒಳಗಾಗಿದ್ದ ಆತನಿಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next