ಬೆಂಗಳೂರು: ಲೈಂಗಿಕ ಕ್ರಿಯೆಗೆ ಸಹಕರಿಸದ ಮಂಗಳಮುಖಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗೆ 1ನೇ ಸಿಸಿಎಚ್ ನ್ಯಾಯಾಲಯ ಮಂಗಳವಾರ ಜೀವವಾಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಅಬ್ದುಲ್ ಫರೀದ್ ಶಿಕ್ಷೆಗೆ ಒಳಗಾದವ. 2011ರಲ್ಲಿ ಆರೋಪಿಯು ನವೀನಾ (ಪ್ರೀತಿ) ಎಂಬ ಮಂಗಳಮುಖಿಯನ್ನು ಹತ್ಯೆಗೈದಿದ್ದ.
ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 1ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್ ಬಿ. ಅಮರಣ್ಣವರ್ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದು, ಒಂದು ವೇಳೆ ದಂಡ ಪಾವತಿಸಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
2011ರ ಅ.28ರಂದು ಸಂಜೆ 7.40ರ ಸುಮಾರಿಗೆ ಮೈಸೂರು ರಸ್ತೆಯ ಶಾಮಣ್ಣ ಗಾರ್ಡನ್‌ನ ಬಿಬುಎಸ್‌ಎಸ್‌ಬಿ ರಸ್ತೆಯಲ್ಲಿ ನವೀನಾ ನಡೆದು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಆರೋಪಿ, ನವೀನಾರನ್ನು ಲೈಂಗಿಕ ಕ್ರಿಯೆಗೆ ಕರೆದಿದ್ದಾನೆ.
ಇದಕ್ಕೆ ನವೀನಾ ನಿರಾಕರಿಸಿದಾಗ ಆಕ್ರೋಶಗೊಂಡ ಅಬ್ದುಲ್, ಚಾಕುವಿನಿಂದ ಆಕೆಯ ಹೊಟ್ಟೆಗೆ ಇರಿದಿದ್ದ. ಇದನ್ನು ಗಮನಿಸಿದ ಕಾನ್‌ಸ್ಪೆಬಲ್‌ಗಳಾದ ವೆಂಕಟೇಶ್ವರಲು ಹಾಗೂ ರಾಮಕೃಷ್ಣ, ಕೂಡಲೇ ನವೀನಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 2011ರ ನ.15ರಂದು ನವೀನಾ ಮೃತಪಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ 1ನೇ ಸಿಸಿಎಚ್ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಸರ್ಕಾರಿ ಅಭಿಯೋಜಕರಾಗಿ ಚನ್ನಪ್ಪ ಜಿ. ಹರಸೂರ ವಾದ ಮಂಡಿಸಿದರು.