Advertisement

ಹಿಂದೂಗಳನ್ನು ಮತಾಂತರಗೊಳಿಸಿದರೆ ಪರಿಣಾಮ ಸರಿ ಇರಲ್ಲ

08:41 PM Oct 12, 2019 | Team Udayavani |

ಚಾಮರಾಜನಗರ: ಧರ್ಮ ಪ್ರಚಾರದ ನೆಪದಲ್ಲಿ ಹಳ್ಳಿಗಳಿಗೆ ತೆರಳಿ ಮುಗ್ಧ ಜನರಿಗೆ ಆಸೆ ಆಮಿಷ ತೋರಿಸಿ ಬಲವಂತವಾಗಿ ಮತಾಂತರ ಮಾಡಿದರೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಜಾದ್‌ ಹಿಂದೂ ಸೇನೆಯ ಸಿ.ಎಂ.ಶಿವರಾಜ್‌ ಕ್ರೈಸ್ತ ಧರ್ಮ ಪ್ರಚಾರಕರು ಹಾಗೂ ಮಿಷನರಿಗಳಿಗೆ ಎಚ್ಚರಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಧರ್ಮ ಪ್ರಚಾರದ ನೆಪದಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಬಡತನದಲ್ಲಿರುವ ಹಿಂದೂಗಳಿಗೆ ಇಲ್ಲದ ಆಸೆ ತೋರಿಸಿ, ಅವರಿಗೆ ಸವಲತ್ತು ಕಲ್ಪಿಸುವ ನೆಪದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ಕೊಳ್ಳೇಗಾಲ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಕಾಡಂಚಿನ ಗ್ರಾಮಗಳ ಗಿರಿಜನರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಬಡ ಜನರನ್ನು ಗುರಿಯಾಗಿಸಿಕೊಂಡು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಕಂಡೂ ಕಾಣದಂತೆ ಯಾವುದೇ ರೀತಿಯ ದೂರು ಬಂದಿಲ್ಲ ಎಂದು ಸುಮ್ಮನೆ ತೇಪೆ ಹಾಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಕೊಳ್ಳೇಗಾಲ ತಾಲೂಕಿನ ಕುಣಗ‌ಳ್ಳಿಯಲ್ಲಿ ಧರ್ಮ ಪ್ರಚಾರದ ನೆಪದಲ್ಲಿ ಈಗಾಗಲೇ ಮತಾಂತರಗೊಂಡಿರುವ ಕೆಲವರು ಗ್ರಾಮಕ್ಕೆ ಭೇಟಿ ಸುವಾರ್ತೆ ನೆಪದಲ್ಲಿ ಜನರ‌ನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಹುನ್ನಾರ ಮಾಡುತ್ತಿದ್ದರು. ಇದರಿಂದ ಎಚ್ಚೆತ್ತ ಹಿಂದೂ ಯುವಕರ ಗುಂಪು ಅವರನ್ನು ಗ್ರಾಮಕ್ಕೆ ಬಿಟ್ಟುಕೊಳ್ಳದೆ ಹೊರ ಕಳುಹಿಸಿದ್ದಾರೆ. ಅಲ್ಲದೇ ಇದರ ವಿಡಿಯೋ ಚಿತ್ರೀಕರಣ ಬಹಿರಂಗವಾಗಿದೆ. ಇಂತಹವರನ್ನು ಗ್ರಾಮದಿಂದ ಹೊರ ಹಾಕುವ ಮೂಲಕ ಹಿಂದೂ ಧರ್ಮ ರಕ್ಷಣೆಯಲ್ಲಿ ಯುವ ಪೀಳಿಗೆ ಮುಂದಾಗಿದೆ ಎಂಬುದನ್ನು ಮತಾಂತರಕ್ಕೆ ಯತ್ನಿಸುವವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ರೀತಿ ಬಲವಂತವಾಗಿ ಮತಾಂತರ ಮಾಡುವ ಪ್ರಕ್ರಿಯೆ ಮುಂದುವರಿದರೆ ಹಿಂದೂ ಪರ ಸಂಘಟನೆಗಳು ಈಗಾಗಲೇ ಮತಾಂತರಗೊಂಡು ಚರ್ಚ್‌ ಕಟ್ಟಿರುವ ಸ್ಥಳಗಳಿಗೆ ತೆರಳಿ ಅವರನ್ನು ಪುನಹ ಹಿಂದೂ ಧರ್ಮಕ್ಕೆ ವಾಪಸ್‌ ಕರೆ ತರುವ ಚಳವಳಿ ಮಾಡಬೇಕಾಗುತ್ತದೆ. ಹಿಂದೂ ದೇವರನ್ನು ಚರ್ಚ್‌ ಒಳಗೆ ಇಟ್ಟು ಪೂಜೆ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಈಗಾಗಲೇ ಮತಾಂತರಗೊಂಡಿರುವ ಬಹಳಷ್ಟು ಮಂದಿ ಹಿಂದೂಗಳು ಪೂರ್ಣವಾಗಿ ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ ಮಾಡದೆ, ಅತ್ತ ಹಿಂದೂಗಳೂ ಆಗಿರದೇ ಎರಡು ಧರ್ಮಗಳ ಸವಲತ್ತು ಹಾಗೂ ಆಚಾರ ವಿಚಾರ ಅಳವಡಿಸಿಕೊಂಡು ತೊಳಲಾಟದಲ್ಲಿದ್ದಾರೆ. ರಾತ್ರಿ ಮಾರಿ ಪೂಜೆ, ಬೆಳಗ್ಗೆ ಮೇರಿ ಪ್ರಾರ್ಥನೆ ಮಾಡುವ ಮಂದಿ ಬಹಳಷ್ಟು ಇದ್ದಾರೆ.

ಹಿಂದೂ ಧರ್ಮ ಜಾತಿ ವ್ಯವಸ್ಥೆಯಲ್ಲಿರುವ ಬಹಳಷ್ಟು ಮಂದಿ ಈ ಧರ್ಮದಿಂದ ದೊರೆಯುವ ಸರ್ಕಾರದ ಸವಲತ್ತು ಪಡೆದುಕೊಳ್ಳುವ ಜೊತೆಗೆ ಅಲ್ಪಸಂಖ್ಯಾತರ ಕೋಟಾದ ಸವಲತ್ತು ಪಡೆದುಕೊಳ್ಳುತ್ತಿದ್ದಾರೆ. ಇಂತಹವರ ವಿರುದ್ದ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಮಾಹಿತಿ ಸಂಗ್ರಹಿಸಿ, ಒಂದು ಧರ್ಮ ಹಾಗೂ ಜಾತಿಯ ಸವಲತ್ತು ನೀಡುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಅರ್ಹರಿಗೆ ಸವಲತ್ತು ತಲುಪುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಲವಂತವಾಗಿ ಮತಾಂತರ ಮಾಡಲು ಮುಂದಾಗಿದ್ದ ಐವರನ್ನು ಬಂಧಿಸಿ, ಕೂಡಲೇ ಅವರ ವಿರುದ್ಧ ಜಿಲ್ಲಾಡಳಿತ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶೀಘ್ರವೇ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಹಿಂದೂಗಳನ್ನು ಜಾಗೃತಿಗೊಳಿಸಲು ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ತಿಳಿಸಿದರು. ಆಜಾದ್‌ ಹಿಂದೂ ಸೇನೆ ಸುಂದರರಾಜ್‌, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಬೂದಿತಿಟ್ಟು ಲಿಂಗರಾಜು, ನೀಲಶೇಖರ್‌, ಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next