Advertisement

ವಿವಾದಕ್ಕೆ ತೆರೆ: ಬಾಹುಬಲಿ-2 ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ

03:45 AM Apr 23, 2017 | Team Udayavani |

ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಸತ್ಯರಾಜ್‌  ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಅವರ ವಿರುದ್ಧ ಹೋರಾಟದಿಂದ ಹಿಂದೆ ಸರಿದಿವೆ. ಏ.28ರಂದು ಬೆಂಗಳೂರು ಬಂದ್‌  ಕರೆ ಸಹ  ಹಿಂದಕ್ಕೆ ಪಡೆದಿದ್ದು, ಬಾಹುಬಲಿ-2 ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅನುವು ಮಾಡಿಕೊಟ್ಟಿದೆ.

Advertisement

ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತ ಹೇಳಿಕೆಯನ್ನು ಸತ್ಯರಾಜ್‌ ನೀಡಿದ್ದರು. ಆ ಬಗ್ಗೆ ಕ್ಷಮೆ ಕೇಳುವಂತೆ ನಾವೆಲ್ಲರೂ ಆಗ್ರಹ ಮಾಡಿದ್ದೇವೆ. ತಮ್ಮ ವಿವಾದಾತ್ಮಕ ಹೇಳಿಕೆ ಸಂಬಂಧ ಶುಕ್ರವಾರ ಸತ್ಯರಾಜ್‌ ವಿಷಾದ ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ವಿರುದ್ಧ ಕೈಗೊಂಡಿದ್ದ ಹೋರಾಟ ಕೈಬಿಡಲಾಗಿದೆ ಮತ್ತು ಏ.28ರಂದು ನಡೆಸಲು ಉದ್ದೇಶಿಸಿದ್ದ ಬೆಂಗಳೂರು ಬಂದ್‌ ವಾಪಾಸ್‌ ಪಡೆಯಲಾಗಿದೆ ಎಂದರು.

ಬಾಹುಬಲಿ ಚಿತ್ರ ಅಥವಾ ನಿರ್ದೇಶಕ ರಾಜಮೌಳಿ ವಿರುದ್ಧ ಯಾವುದೇ ದ್ವೇಷ ಇಲ್ಲ. ನಮ್ಮ ಹೋರಾಟವು ಸತ್ಯರಾಜ್‌ ವಿರುದ್ದವಾಗಿತ್ತು. ಚಿತ್ರ ಬಿಡುಗಡೆ ಸಂಬಂಧ ಸ್ವತಃ ರಾಜಮೌಳಿಯವರೇ ಮನವಿ ಮಾಡಿಕೊಂಡಿದ್ದಾರೆ. ಸತ್ಯರಾಜ್‌ ಬಹಿರಂಗ ಕ್ಷಮೆಯಾಚಿಸುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದೇವು. ಈಗ ಸತ್ಯರಾಜ್‌ ಕ್ಷಮೆ ಕೇಳಿದ್ದಾರೆ. ಹೀಗಾಗಿ ಬಾಹುಬಲಿ-2 ಚಿತ್ರ ಬಿಡುಗಡೆಗೆ ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿದರು.

ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ರದ್ದು ಮಾಡಿದರೆ, ಕರ್ನಾಟಕದಲ್ಲೂ ತಮಿಳು ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಹಾಗೆಯೇ ತಮಿಳು ಚಾನಲ್‌ಗ‌ಳನ್ನು ರನ್‌ ಮಾಡಲು ಬಿಡುವುದಿಲ್ಲ. ಕನ್ನಡ ನಾಡು, ನುಡಿಯ ಬಗ್ಗೆ ಯಾರೇ ಆಕ್ಷೇಪಾರ್ಹ ಹೇಳಿಕೆ ನೀಡದರೂ ಅದನ್ನು ನಾವು ಖಂಡಿಸುತ್ತೇವೆ ಮತ್ತು ಅದರ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡಪರ ಹೋರಾಟಗಾರರಾದ ಪ್ರವೀಣ್‌ಶೆಟ್ಟಿ, ಕೆ.ಅರ್‌.ಕುಮಾರ್‌ ಮೊದಲಾದವರು ಗೋಷ್ಠಿಯಲ್ಲಿದ್ದರು.

Advertisement

ತಮಿಳು ಚಿತ್ರ ರದ್ದು:
ಸತ್ಯರಾಜ್‌ ಕ್ಷಮೆಯಾಚಿಸುತ್ತಿದ್ದಂತೆ ತಮಿಳುನಾಡಿನಲ್ಲಿ ಕನ್ನಡ ಚಲನಚಿತ್ರ ರದ್ದುಗೊಳಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ಬೆಂಗಳೂರು ನಗರದ ಕೆಲವು ಸಿನಿಮಾ ಥಿಯೇಟರ್‌ನಲ್ಲಿ ತಮಿಳು ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಮುಂಜಾಗ್ರತ ಕ್ರಮವಾಗಿ  ಪೊಲೀಸರು ಕೆಲವು ಚಿತ್ರಮಂದಿರಕ್ಕೆ ಭದ್ರತೆ ಒದಗಿಸಿದ್ದಾರೆ. ನಗರದಲ್ಲಿ ತಮಿಳು ಚಿತ್ರ ಪ್ರದರ್ಶಿಸುವ ನಟರಾಜ್‌,  ಊರ್ವಶಿ, ಸಂಪಿಗೆ ಸೇರಿ ಚಿತ್ರಮಂದರಿದಲ್ಲೂ ಕೆಲವು ಪ್ರದರ್ಶನ ವ್ಯತ್ಯಯವಾಗಿದೆ.

ಕನ್ನಡಿಗರ ಬಗ್ಗೆ ಕೀಳು ಭಾಷೆ ಪ್ರಯೋಗ ಮಾಡುವ ಯಾರ ಚಲನಚಿತ್ರದ ಪ್ರದರ್ಶನಕ್ಕೂ ಇಲ್ಲಿ ಅವಕಾಶ ನೀಡುವುದಿಲ್ಲ. ಕಟ್ಟಪ್ಪ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಬಾಹುಬಲಿ-2 ಅವಕಾಶ ನೀಡಿದ್ದೇವೆ. ಸತ್ಯರಾಜ್‌ ಬಾಯಿ ಭದ್ರವಾಗಿರಬೇಕು.
-ವಾಟಾಳ್‌ ನಾಗರಾಜ್‌, ಕನ್ನಡ ಪರ ಒಕ್ಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next