Advertisement

ವಿವಾದ ಸೃಷ್ಟಿಸಿದ‌  ಸಚಿವ ಖಾದರ್‌  ಹೇಳಿಕೆ 

01:28 PM Feb 26, 2017 | Team Udayavani |

ಮಂಗಳೂರು: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್‌ ಮಂಗಳೂರಿನ‌ ಕಾರ್ಯಕ್ರಮವೊಂದರಲ್ಲಿ ಚಪ್ಪಲಿ ಪದ ಬಳಸಿ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. 
ಶನಿವಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ದ.ಕ. ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಹರತಾಳ ಉಲ್ಲೇಖೀಸಿ ದೇಶದ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಚಪ್ಪಲಿಯಿಂದ ಹೊಡೆಯುವ ಕೆಲಸ ಇಂದು ಆಗಬೇಕಾಗಿದೆ ಎಂದಿದ್ದರು.

Advertisement

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅತಿಥಿಯಾಗಿದ್ದ ಸಮಾರಂಭದಲ್ಲಿ ಸಚಿವ ಖಾದರ್‌ ಕೂಡ ಅತಿಥಿಯಾಗಿದ್ದರು. ಸಭೆ ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು, ಪಿಣರಾಯಿ ವಿಜಯನ್‌ ವಿರುದ್ಧ ಹಮ್ಮಿಕೊಂಡಿದ್ದ ದ.ಕ. ಜಿಲ್ಲಾ ಹರತಾಳ ಟೀಕಿಸುತ್ತಾ ಪ್ರಜಾಸತ್ತಾತ್ಮಕ, ಸಂವಿಧಾನಬದ್ಧವಾಗಿ ಆಯ್ಕೆಯಾದ ಮುಖ್ಯಮಂತ್ರಿ ಅವರ ಆಗಮನ ವಿರೋಧಿಸುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾದುದು. ಅತಿಥಿಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಇಂದು ಕೆಲವು ಶಕ್ತಿಗಳು ಬಂದ್‌ಗೆ ಕರೆ ನೀಡುವ ಮೂಲಕ ನಮ್ಮ ಸಂಸ್ಕೃತಿ, ಸಂವಿಧಾನಕ್ಕೆ ಅಪಚಾರ ಮಾಡಿವೆ. ಸಂವಿಧಾನಕ್ಕೆ ಅಗೌರವ ತೋರುವವರಿಗೆ ಚಪ್ಪಲಿಯಿಂದ ಹೊಡೆಯುವ ಕೆಲಸ ಇಂದು ಆಗಬೇಕಾಗಿದೆ ಎಂದರು. 

ಮಂಗಳೂರಿನಲ್ಲಿ ಸಿಪಿಎಂ ಶನಿವಾರ ಆಯೋಜಿಸಿದ್ದ ಕರಾವಳಿ ಸೌಹಾರ್ದ ರ್ಯಾಲಿಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗವಹಿಸುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ದಕ್ಷಿಣ ಕನ್ನಡ  ಜಿಲ್ಲೆಯಾದ್ಯಂತ ಹರತಾಳಕ್ಕೆ ಕರೆ ನೀಡಿದ್ದವು.

ಅವಮಾನಿಸುವ ಉದ್ದೇಶ ಇಲ್ಲ: ಖಾದರ್‌
ಮಂಗಳೂರು: ಯಾರನ್ನೂ ಅವಮಾನಿಸುವ ಉದ್ದೇಶದಿಂದ ನಾನು ಮಾತನಾಡಿಲ್ಲ ಸಂವಿಧಾನಾತ್ಮಕವಾಗಿ ಆಯ್ಕೆಯಾದ ನೆರೆಯ ರಾಜ್ಯದ ಮುಖ್ಯಮಂತ್ರಿಗಳು ಅದರಲ್ಲೂ 70 ವರ್ಷದ ಹಿರಿಯ, ಗೌರವಾನ್ವಿತ ಸ್ಥಾನದಲ್ಲಿರುವವರು ಜಿಲ್ಲೆಗೆ ಬರುವ ಸಂದರ್ಭದಲ್ಲಿ ಜಿಲ್ಲೆಯ ಗೌರವ ಮತ್ತು ಸಂಸ್ಕೃತಿಗೆ ಧಕ್ಕೆಯಾದ ನೋವಿನಿಂದ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next