ಬಾಳೆಹೊನ್ನೂರು: ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಆಯಾ ಕಾಲ ಘಟ್ಟಗಳಲ್ಲಿ ಆಚಾರ್ಯರು, ಋಷಿ ಮುನಿಗಳು ಮತ್ತು ಸಂತ ಮಹಂತರು ಅವತರಿಸಿ ಬಾಳಿಗೆ ಬೆಳಕು ತೋರಿ ಮನ್ನಡೆಸಿದ್ದನ್ನು ಯಾರೂ ಮರೆಯುವಂತಿಲ್ಲ ಎಂದು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಕೊನೆಯ ದಿನದಂದು ಭದ್ರಾನದಿ ತೀರದಲ್ಲಿ ಸುರಗೀ ಸಮಾರಾಧನೆ ಮತ್ತು ಇಷ್ಟಲಿಂಗ ಪೂಜೆ ಸಲ್ಲಿಸಿ ನಂತರ ಅವರು ಆಶೀರ್ವಚನ ನೀಡಿದರು.
ಭೌತಿಕ ಸಂಪತ್ತು ಬೆಟ್ಟದಷ್ಟಿದ್ದರೂ ಶಾಂತಿ ಸಿಗದು. ತೃಪ್ತಿ- ಸಂತೃಪ್ತಿಯ ಬದುಕು ನಿರ್ಮಾಣಗೊಳ್ಳದು. ಸಂಪತ್ತಿನ ಜೊತೆಗೆ ಒಂದಿಷ್ಟು ಜ್ಞಾನದ ಸಂಪತ್ತನ್ನು ಗಳಿಸಿದರೆ ಜೀವನ ಸಾರ್ಥಕವಾದೀತು. ಹೃದಯ ಶ್ರೀಮಂತಿಕೆಯಲ್ಲದೆ ಬುದ್ಧಿ ಎಷ್ಟಿದ್ದರೂ ಪ್ರಯೋಜನಕ್ಕೆ ಬಾರದು. ಹೃದಯ ಹೃದ್ರೂಮಿಯನ್ನು ಕೃಷಿಗೈದು ಶಿವಜ್ಞಾನದ ಬೀಜವನ್ನು ಬಿತ್ತಬೇಕಾಗಿದೆ. ಸುಖ- ಶಾಂತಿಯ ಸತ್ಸಲ ಪಡೆದು ಜೀವನದಲ್ಲಿ ನೆಮ್ಮದಿಯಿಂದ ಬಾಳಬೇಕಾಗಿದೆ. ಮರೆಯುವುದು ಮನುಜರ ಸಹಜ ಗುಣ. ಮರೆತುದನ್ನು ನೆನಪು ಮಾಡಿಕೊಡುವುದು ಗುರುವಿನ ಧರ್ಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಸ್ವಾಮೀಜಿ, ಹೂಲಿ ಶ್ರೀಗಳು ಸೇರಿದಂತೆ ಶ್ರೀ ರಂಭಾಪುರಿ ಪೀಠದ ವಿವಿಧ ಶಾಖಾ ಮಠದ ಶಿವಾಚಾರ್ಯರು, ಭಕ್ತರು ಪಾಲ್ಗೊಂಡಿದ್ದರು. ಆಗಮಿಸಿದ ಎಲ್ಲಾ ಭಕ್ತರಿಗೆ ಖಡಕ್ ರೊಟ್ಟಿ, ಪಾಯಸ, ಕಡ್ಲೆಹಿಟ್ಟು ಮಾಲ್ದಿಪುಡಿ, ಮುಳುಗಾಯಿ ಹುಚ್ಚೆಳ್ಳು ಪಲ್ಯ, ಹಾಗೂ ಅನ್ನ ಸಂತರ್ಪಣೆ ನಡೆಯಿತು