Advertisement

ಜೈನರ ಕೊಡುಗೆ ನಾಡಿಗೆ ಅಪಾರ

01:11 AM Jun 17, 2019 | Lakshmi GovindaRaj |

ಬೆಂಗಳೂರು: ಜೈನರ ಇತಿಹಾಸದ ಮೂಲಕ ಕರ್ನಾಟಕದ ಇತಿಹಾಸ ನೋಡಬೇಕು. ಅಷ್ಟರಮಟ್ಟಿಗೆ ಆ ಸಮುದಾಯದ ಕೊಡುಗೆ ನಾಡಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಾಜೇಂದ್ರಬಾಬು ವಿಶ್ಲೇಷಿಸಿದರು.

Advertisement

ನಗರದ ವಿಶ್ವೇಶ್ವರಯ್ಯಪುರದ ಕರ್ನಾಟಕ ಜೈನ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಜೈನ ಅಸೋಸಿಯೇಷನ್‌ (ಕೆಜೆಎ) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜೈನ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ ಮೊದಲಾದ ಕವಿಗಳು ಈ ನಾಡಿಗೆ ಉತ್ಕೃಷ್ಟ ಸಾಹಿತ್ಯ ನೀಡಿದ್ದಾರೆ. ಜೈನ ರಾಜರು ಉತ್ತಮ ಆಡಳಿತ ನೀಡಿದ್ದಾರೆ. ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಜೈನ ಸಾಹಿತಿಗಳು ರಾರಾಜಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ಜೈನ ಸಮುದಾಯದ ಹಲವರು ಉದ್ಯಮ, ವ್ಯಾಪಾರ, ಶಿಕ್ಷಣ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಶತಮಾನದ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಜೈನ ಅಸೋಸಿಯೇಷನ್‌ ಹಾಗೂ ಜೈನ ವಿದ್ಯಾರ್ಥಿ ನಿಲಯ ಇಂದು ಹೆಮ್ಮರವಾಗಿ ಬೆಳೆದಿವೆ. ಈ ಸಂಸ್ಥೆಗಳ ಮೂಲಕ ಹಲವರು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಮುಂದೆಯೂ ಈ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾವತಿ ಮಾತನಾಡಿ, ಯಾವೊಂದು ಸಮುದಾಯ ಹೆಮ್ಮರವಾಗಿ ಬೆಳೆಯಬೇಕಾದರೆ ಶಿಕ್ಷಣ ಮತ್ತು ಸಂಘಟನೆ ಬಹುಮುಖ್ಯ. ಸಮಾಜದಲ್ಲಿ ಉತ್ತಮ ಗುಣವುಳ್ಳ ಮತ್ತು ಒಳ್ಳೆಯ ಮೌಲ್ಯಗಳನ್ನು ಹುಟ್ಟುಹಾಕುವ ಜನ ಬೇಕಿದೆ. ಸಮಾಜದಲ್ಲಿ ಏನಾದರೂ ಕೊಡುಗೆ ನೀಡಬೇಕು ಎಂಬ ಬಗ್ಗೆ ಯೋಚಿಸಬೇಕು ಎಂದರು.

1932ರಲ್ಲಿ ಎಂ.ಎಲ್‌.ವರ್ಧಮಾನಯ್ಯ ಅವರು ಮೈಸೂರು ಜೈನ್‌ ಅಸೋಸಿಯೇಷನ್‌ ಅನ್ನು ಹುಟ್ಟುಹಾಕಿದ್ದು, ಈಗ ಕರ್ನಾಟಕ ಜೈನ್‌ ಅಸೋಸಿಯೇಷನ್‌ ಎಂಬ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದಿದೆ. ಅನೇಕ ಸವಾಲುಗಳ ನಡುವೆಯೂ ಮೋತೀಖಾನೆ ಪದ್ಮನಾಭಯ್ಯ ಮತ್ತು ವರ್ಧಮಾನಯ್ಯ ಸಂಸ್ಥೆಯನ್ನು ಬೆಳೆಸಿದ್ದರು. ಅನೇಕ ಸಂಸ್ಥೆಗಳು ಹುಟ್ಟುಹಾಕಿದ ಹತ್ತಾರು ವರ್ಷದಲ್ಲಿ ನಶಿಸಿ ಹೋಗುತ್ತವೆ.

Advertisement

ಆದರೆ, ಇತಿಹಾಸದಲ್ಲೇ ನೂರು ಕಾಲ ಉಳಿದು ಬೆಳೆದಿರುವುದು ಜೈನ್‌ ಆಸೋಸಿಯೇಷನ್‌ ಸಂಸ್ಥೆ ಮಾತ್ರ ಎಂದು ಶ್ಲಾ ಸಿದರು. ಇದೇ ವೇಳೆ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ಕುಮಾರ್‌ ಅವರು “ಶತ ಸಂಭ್ರಮ’ ಮತ್ತು “ವಿಶ್ವಬಂಧು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಪ್ರಧಾನ ಅಂಚೆ ವ್ಯವಸ್ಥಾಪಕ ಚಾರ್ಲ್ಸ್‌ ಲೋಬೋ ಅವರು ಶತಮಾನೋತ್ಸವದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ, ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಜಿತೇಂದ್ರ ಕುಮಾರ್‌, ಸಾಹಿತಿ ಡಾ.ಹಂಪ ನಾಗರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next