ಬೆಂಗಳೂರು: “ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಪಡುವ ಬಹುತೇಕ ಸಂಗತಿಗಳೇ ಇಂದಿನ ಮಾಧ್ಯಮಗಳ ಪ್ರಮುಖ ಸುದ್ದಿ ಸರಕಾಗಿದೆ,’ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ರಾಜೀವ್‌ಗೌಡ ಅಭಿಪ್ರಾಯಪಟ್ಟಿದ್ದಾರೆ.
“ಕಮ್ಯೂನಿಕೇಷನ್ ಫಾರ್ ಡೆವಲೆಪ್‌ಮೆಂಟ್ ಆ್ಯಂಡ್ ಲರ್ನಿಂಗ್’ ಹಾಗೂ “ನ್ಯಾಷನಲ್ ಫೌಂಡೇಷನ್ ಫಾರ್ ಇಂಡಿಯಾ’ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ “ಸುದ್ದಿಮನೆಗಳಲ್ಲಿ ಸಾಮಾಜಿಕ ಜಾಲತಾಣ-ಪ್ರವೃತ್ತಿಗಳು ಮತ್ತು ಅಭ್ಯಾಸಗಳು’ ಕುರಿತ ವಿಚಾರಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
“ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳುತ್ತಿವೆ. ಜತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಅತ್ಯಂತ ಜಾಗೃತ ಮತ್ತು ಸಕಾಲಿಕವಾಗಿರುತ್ತಾರೆ. ಪ್ರತಿಯೊಂದು ವಿಷಯ ಮತ್ತು ವಿದ್ಯಮಾನಗಳ ಬಗ್ಗೆ ಅಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿರುತ್ತವೆ.
ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾರ್ವಜನಿಕರಿಗೆ ಇಲ್ಲಿ ಮುಕ್ತ ಅವಕಾಶವಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಅನೇಕ ಚರ್ಚೆಗಳು ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ ಅನೇಕ ಉದಾಹರಣೆಗಳಿವೆ. ಹಾಗಾಗಿ ಹಲವು ಸಂದರ್ಭಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳನ್ನು ಅನುಸರಿಸಿದ ಅನೇಕ ನಿದರ್ಶನಗಳು ನಮ್ಮ ಮುಂದಿವೆ,’ ಎಂದರು.
“ಇಂದು ಸಾಮಾಜಿಕ ಜಾಲತಾಣಗಳ ವಿಶ್ವಾರ್ಸಹತೆಯೂ ಚರ್ಚಿತ ವಿಷಯವಾಗಿದೆ. ಅದಾಗ್ಯೂ ಆದರ ಅವಶ್ಯಕತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಿರ್ಭಯಾ ಪ್ರಕರಣದಲ್ಲಿ ವ್ಯಕ್ತವಾದ ಜನರ ಸ್ಪಂದನೆ ಮತ್ತು ಆ ಘಟನೆ ಆಧರಿಸಿ ಕಾನೂನು ರಚನೆ ಆಗಿರುವುದಕ್ಕೆ ಮಾಧ್ಯಮಗಳ ಜತೆಗೆ ಸಾಮಾಜಿಕ ಜಾಲತಾಣದ ಸಕ್ರೀಯ ಪಾತ್ರ ಕಾರಣ ಅನ್ನುವುದನ್ನು ಮರೆಯುವಂತಿಲ್ಲ,’ ಎಂದು ಹೇಳಿದರು.
ಈ ಸಂದರ್ಭದಲ್ಲಿ “ಡಿಜಿಟಲ್ ಮಾಧ್ಯಮಗಳ ಮೂಲಕ ನಾಗರಿಕ ಸಮಸ್ಯೆಗಳ ಪ್ರಚಾರ’ ಕುರಿತು ಮೆಗಸ್ಸೇ ಪ್ರಶಸ್ತಿ ವಿಜೇತ ಪತ್ರಕರ್ತ ಪಿ. ಸಾಯಿನಾಥ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹೇಮಾ ಪ್ರಸನ್ನ, ಸಂಗನದಾಸ ಗುಪ್ತ, ಎನ್‌ಎಫ್‌ಐ ನಿರ್ದೇಶಕ ಅಮಿತಾಬ್ ಬಿಹಾರ್, ಪರಂಜಯ ಗುಹಾ ಠಾಕೂರ್ಥ, ನೂಪುರ್ ಬಸು, ವಾಸಂತಿ ಹರಿಪ್ರಕಾಶ, ಕಾಂಚನ ಕೌರ್, ಪ್ರಕಾಶ ಬೆಳವಾಡಿ ಇನ್ನಿತರರು ಉಪಸ್ಥಿತರಿದ್ದರು.