ಮಹಾನಗರ: ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಮುಂದಿನ ದಿನಗಳಲ್ಲಿ ನಗರ ದಲ್ಲಿರುವ ವೃತ್ತದ ಬದಲು ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ಸ್ಮಾರ್ಟ್‌ಸಿಟಿ ಮತ್ತು ಸ್ಥಳೀಯಾಡಳಿತ ಮುಂದಾಗಿದೆ. ಇದೀಗ ಮೊದಲ ಹಂತದಲ್ಲಿ ನಗರದ ಎ.ಬಿ. ಶೆಟ್ಟಿ ವೃತ್ತಕ್ಕೆ ಹೊಸ ಸ್ವರೂಪ ಸಿಗಲಿದೆ.
ಈ ಭಾಗದಲ್ಲಿ ಏಕಪಥ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಅದು ಸ್ಮಾರ್ಟ್ ರಸ್ತೆಯಾಗಿ ಪರಿವರ್ತನೆ ಯಾಗುತ್ತಿದೆ. ಈ ವೇಳೆ ಈಗಿದ್ದ ಟ್ರಾಫಿಕ್ ವ್ಯವಸ್ಥೆ ಬದಲಾವಣೆಯಾಗುವಾಗ ಎ.ಬಿ. ಶೆಟ್ಟಿ ವೃತ್ತಕ್ಕೆ ವೈಜ್ಞಾನಿಕ ಸ್ವರೂಪ ನೀಡಲು ನಿರ್ಧರಿಸಲಾಗಿದೆ. ಇದ ಕ್ಕಾಗಿ ಸದ್ಯ ಎ.ಬಿ. ಶೆಟ್ಟಿ ವೃತ್ತವನ್ನು ಕೆಡಹಲಾಗುತ್ತಿದೆ. ಈಗಾಗಲೇ ನೀಲ ನಕ್ಷೆ ತಯಾರು ಮಾಡಿದ್ದು, ಅದರಂತೆ ಎ.ಬಿ. ಶೆಟ್ಟಿ ವೃತ್ತದ ಬಳಿ ನಾಲ್ಕು ಟ್ರಾಫಿಕ್ ಐಲ್ಯಾಂಡ್ ನಿರ್ಮಾಣವಾಗಲಿದೆ. ಈಗಿದ್ದ ಎ.ಬಿ. ಶೆಟ್ಟಿ ಹೆಸರನ್ನೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಟ್ರಾಫಿಕ್ ಐಲ್ಯಾಂಡ್ ನಿರ್ಮಾಣದಿಂದಾಗಿ ಲೇನ್‌ಗಳಲ್ಲಿ ವಾಹನಗಳು ವ್ಯವಸ್ಥಿತವಾಗಿ ಸಂಚರಿಸಲು ಸಹಾಯ ವಾಗುತ್ತದೆ. ಇದಕ್ಕೆ ವೃತ್ತದಷ್ಟು ಸ್ಥಳಾ ವಕಾಶ ಇರದ ಕಾರಣ ಸರಾಗವಾಗಿ ವಾಹನಗಳು ತಿರುವು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ನಗರಕ್ಕೆ ಹೊಸ ಸ್ವರೂಪದ ಟ್ರಾಫಿಕ್ ಐಲ್ಯಾಂಡ್‌ನಲ್ಲಿ ಹಚ್ಚ ಹಸುರು ಕಂಗೊಳಿಸುವಂತೆ ಲಾನ್, ಬೀದಿ ದೀಪ ಸಹಿತ ಸ್ಮಾರ್ಟ್‌ಪೋಲ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ.
ಏಕಮುಖ ಸಂಚಾರ; ಐದು ಲೇನ್ ರಸ್ತೆ:
ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತ-ಹ್ಯಾಮಿಲ್ಟನ್ ವೃತ್ತ-ರಾವ್ ಆ್ಯಂಡ್ ರಾವ್ ವೃತ್ತದಿಂದ ಮತ್ತೆ ಕ್ಲಾಕ್ ಟವರ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ (ಲೂಪ್ ರಸ್ತೆ) ಮಾಡಲಾಗಿದ್ದು, ಈ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಐದು ಲೇನ್ ನಿರ್ಮಾಣವಾಗಲಿವೆ. ಇದರಲ್ಲಿ ಬಸ್‌ಗಳು ಸಂಚರಿಸಲೆಂದು ಪ್ರತ್ಯೇಕ ಲೇನ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನು, ಈ ಭಾಗದಲ್ಲಿ ಸುಗಮ ವಾಹನ ಸಂಚಾರಕ್ಕೆಂದು ಮೂರು ಲೇನ್‌ಗಳು ನಿರ್ಮಾಣವಾಗಲಿದೆ. ಈ ರಸ್ತೆಯಲ್ಲಿ ಮುಖ್ಯವಾಗಿ ನೆಹರೂ ಮೈದಾನ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಪಾರ್ಕ್ ಗಳು ಸಹಿತ ಕೆಲವೊಂದು ಸರಕಾರಿ ಕಚೇರಿಗಳಿವೆ. ಹೀಗಿದ್ದಾಗ ಪಾರ್ಕಿಂಗ್ ವ್ಯವಸ್ಥೆಗೆಂದು ಪ್ರತ್ಯೇಕ ಲೇನ್ ವ್ಯವಸ್ಥೆ ಮಾಡಲಾಗುತ್ತದೆ. ರಸ್ತೆಯುದ್ದಕ್ಕೂ ಮಾದರಿ ಫುಟ್‌ಪಾತ್ ನಿರ್ಮಾಣ ಮಾಡಲಿದ್ದು, ಫುಟ್‌ಪಾತ್‌ನಲ್ಲಿ ಲಾನ್ ಮಾದರಿಯ ಹಸುರು ಹುಲ್ಲು ಬೆಳೆಸಲು ನಿರ್ಧರಿಸಲಾಗಿದೆ. ರಸ್ತೆ, ಫುಟ್‌ಪಾತ್‌ನಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ವಿದ್ಯುತ್ ಕಂಬ ಅಳವಡಿಸಲಾಗುತ್ತಿದೆ.
ನಗರದ ಕ್ಲಾಕ್ ಟವರ್ ಬಳಿಯಿಂದ ವೃತ್ತಾಕಾರದಲ್ಲಿ ಮತ್ತೆ ಕ್ಲಾಕ್‌ಟವರ್ ರಸ್ತೆಯವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಪರಿವರ್ತನೆ ಮಾಡಲಾ ಗುತ್ತದೆ. ಇದಕ್ಕೆಂದು ಪ್ರತ್ಯೇಕ ಐದು ಲೇನ್ ನಿರ್ಮಾಣ ಮಾಡಲಾಗುತ್ತದೆ. ಎ.ಬಿ. ಶೆಟ್ಟಿ ವೃತ್ತವನ್ನು ಕೆಡಹಿ ಅಲ್ಲಿ ಕೂಡ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡುತ್ತೇವೆ. ಎ.ಬಿ. ಶೆಟ್ಟಿ ಹೆಸರನ್ನು ಅದಕ್ಕೆ ಇಡುತ್ತೇವೆ.
–ಅರುಣ್‌ಪ್ರಭಾ ಕೆ.ಎಸ್., ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್
– ನವೀನ್ ಭಟ್ ಇಳಂತಿಲ