Advertisement

2019ರೊಳಗೆ ರಾಮಮಂದಿರ ನಿರ್ಮಾಣ: ಪೇಜಾವರಶ್ರೀ ವಿಶ್ವಾಸ

07:44 AM Nov 25, 2017 | Team Udayavani |

ಉಡುಪಿ: ಇನ್ನೆರಡು ವರ್ಷದೊಳಗೆ (2019) ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆರಂಭವಾಗಬಹುದು ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.

Advertisement

ಕಲ್ಸಂಕ ರೋಯಲ್‌ ಗಾರ್ಡನ್‌ನಲ್ಲಿ ನಿರ್ಮಿಸ ಲಾದ ನಾರಾಯಣಗುರು ಸಭಾಮಂಟಪ, ಆರ್‌. ಭರಣಯ್ಯ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ 12ನೇ ಧರ್ಮಸಂಸದ್‌ ಅಧಿ ವೇಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂದಿರ ನಿರ್ಮಾಣಕ್ಕೆ ಬೇಕಾದ ಪೂರಕ ವಾತಾವರಣ ಕಂಡುಬರುತ್ತಿದೆ. ಹೀಗಾಗಿ ಇದು ಕೇವಲ ಘೋಷಣೆ ಅಲ್ಲ, ಆಗುತ್ತದೆ ಎಂಬ ವಿಶ್ವಾಸ. ಈಗ ಅಲ್ಲಿ ಕಾರಾಗೃಹದ ವಾತಾವರಣವಿದೆ, ಅಂಥಲ್ಲಿ ಭವ್ಯಮಂದಿರದ ಒಳಗೆ ವಿರಾಜಮಾನನಾದ ರಾಮನ ದರ್ಶನ ಮಾಡುವ ಸ್ಥಿತಿ ಬಂದರೆ ಬಹಳ ಸಂತೋಷವಾಗುತ್ತದೆ ಎಂದರು.

ಗೋಹತ್ಯೆ ನಿಷೇಧಕ್ಕೆ ಆಂದೋಲನ
ಗೋಹತ್ಯೆ ನಿಷೇಧ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾತ್ರವಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿ ಪ್ರತಿ ರಾಜ್ಯದಲ್ಲಿ ಪ್ರತ್ಯೇಕವಾಗಿ ಆಂದೋಲನ ನಡೆಯಬೇಕಾಗಿದೆ ಎಂದರು.

ಅಸ್ಪೃಶ್ಯತೆ, ಅಸಮಾನತೆಯೇ ವಿಷ
ಸಮುದ್ರಮಥನವು ದೇವತೆಗಳು ಮತ್ತು ದೈತ್ಯರ ನಡುವೆ ನಡೆದಿತ್ತು. ಈಗ ದೇವತೆಗಳೇ ಸೇರಿ ಸಮುದ್ರಮಥನ ನಡೆಸುತ್ತಿದ್ದಾರೆ. ಆಗ ಕಾಲಕೂಟ ವಿಷ ಉದ್ಭವಿಸಿತ್ತು. ಈಗ ಇಲ್ಲಿರುವ ವಿಷವೆಂದರೆ ಅಸ್ಪೃಶ್ಯತೆ, ಅಸಮಾನತೆ. ಜಾತಿ, ಐಶ್ವರ್ಯದಿಂದ ಯಾರೂ ಶ್ರೇಷ್ಠರಾಗಲಾರರು. ದಲಿತ ಭಕ್ತನು ನಾಸ್ತಿಕ ಬ್ರಾಹ್ಮಣನಿಗಿಂತ ಶ್ರೇಷ್ಠ ಎಂಬ ಶ್ರೀಮದ್ಭಾಗವತದ ಸಂದೇಶವನ್ನು ಜಾರಿಗೆ ತರಲೆಂದೇ 1983ರ ಉಜಿರೆ ವಿಹಿಂಪ ಸಮ್ಮೇಳನದಲ್ಲಿ ನಾವು “ಮಮ ದೀಕ್ಷಾ ಹಿಂದು ರಕ್ಷಾ’, “ಮಮ ಮಂತ್ರಃ ಸಮಾನತಾ’ ಘೋಷಣೆಗಳನ್ನು ನೀಡಿದ್ದೆವು ಎಂಬುದನ್ನು ಪೇಜಾವರ ಶ್ರೀಗಳು ನೆನಪಿಸಿಕೊಂಡರು. ಈ ಧರ್ಮಸಂಸದ್‌ ಎಂಬ ಸಮುದ್ರ ಮಥನದಿಂದ ಆಧ್ಯಾತ್ಮಿಕ ಪ್ರಗತಿ, ಭೌತಿಕ ಸಮೃದ್ಧಿ ಹಿಂದೂ ಸಮಾಜಕ್ಕೆ ದೊರಕುವಂತಾಗಲಿ ಎಂದು ಹಾರೈಸಿದರು.

ಅಲ್ಪ-ಬಹುಸಂಖ್ಯಾಕ ಭೇದ ಬೇಡ
ಭಾರತ ಜಾತ್ಯತೀತ ರಾಷ್ಟ್ರ. ದೇಶದ ಸಂವಿಧಾನ ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ. ಆದರೆ ಇಲ್ಲಿ, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವಾಗ ಅಲ್ಪಸಂಖ್ಯಾಕರಿಗೆ ಒಂದು ಕಾನೂನು, ಬಹುಸಂಖ್ಯಾಕರಿಗೆ ಒಂದು ಕಾನೂನು ಜಾರಿಯಲ್ಲಿದೆ. ಹೀಗೆ ಧರ್ಮದ ಆಧಾರದಲ್ಲಿ ಸಮಾಜ ವಿಭಜಿಸುವುದು ಸರಿಯಲ್ಲ. ಈ ದೃಷ್ಟಿ ಯಲ್ಲಿ ನೋಡಿದರೆ ಆರೆಸ್ಸೆಸ್‌, ವಿಹಿಂಪದವರು ಧರ್ಮದ ಆಧಾರದಲ್ಲಿ ವಿಭಜನೆ ಮಾಡುತ್ತಿಲ್ಲ; ಸೆಕ್ಯುಲರ್‌ ನೀತಿ ಹೇಳುವವರು ಸಮಾಜ ವಿಭಜನೆ ಮಾಡುತ್ತಿದ್ದಾರೆ ಎಂದರು ಪೇಜಾವರ ಶ್ರೀ.

Advertisement

ಷಣ್ಮುಖ- ಷಣ್ಮತ
ಸುಬ್ರಹ್ಮಣ್ಯ ಷಷ್ಠಿಯ ದಿನ, ಶುಕ್ರವಾರ ಧರ್ಮಸಂಸದ್‌ ಅಧಿವೇಶನ ಆರಂಭಗೊಂಡಿದೆ. ಸುಬ್ರಹ್ಮಣ್ಯ ನಿಗೆ ಷಣ್ಮುಖ ಎಂದೂ ಕರೆಯುತ್ತಾರೆ. ಇದರರ್ಥ ಆರು ಮುಖಗಳು. ವಿಶ್ವ ಹಿಂದೂ ಪರಿಷತ್‌ ಪ್ರಕಾರ ಭಾರತೀಯ ಮೂಲದ ಪ್ರವಾದಿಗಳು ಪ್ರವರ್ತಿಸಿದ ಮತಗಳು ಹಿಂದೂ ವ್ಯಾಪ್ತಿಗೆ ಬರುತ್ತವೆ. ಇಲ್ಲಿ  ಶೈವ, ವೈಷ್ಣವ, ಶಾಕ್ತ, ಜೈನ, ಬೌದ್ಧ, ಸಿಕ್ಖ್  ಹೀಗೆ ಷಣ್ಮತಗಳಿವೆ. ಬುದ್ಧ, ಗುರುನಾನಕ್‌, ವೀರಶೈವರು, ಲಿಂಗಾಯತರು, ವೈಷ್ಣವರು, ಶೈವರು ಎಲ್ಲರೂ ಹಿಂದೂಗಳು. ಷಣ್ಮುಖನಿಗೆ ಆರು ಮುಖಗಳಿದ್ದರೂ ಹೃದಯ ಒಂದೇ, ಅದೇ ರೀತಿ ಷಣ್ಮತಗಳಿದ್ದರೂ ಹೃದಯ ಒಂದೇ.
– ಪೇಜಾವರ ಶ್ರೀಗಳು

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next