ಕಲಬುರಗಿ: ಸೇಡಂ ಮತಕ್ಷೇತ್ರದಲ್ಲಿ ಕಾಗಿಣಾ ಮತ್ತು ಕಮಲಾವತಿ ನದಿಗೆ ಹಲವು ಕಡೆ ಬ್ರಿಜ್ಡ ಕಂ ಬ್ಯಾರೇಜ್ ನಿರ್ಮಿಸುವ ಮೂಲಕ ಈ ಭಾಗದ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು.
ಸೇಡಂ ತಾಲೂಕಿನ ದೇವನೂರು ಗ್ರಾಮದಲ್ಲಿ 2016-17ನೇ ಸಾಲಿನ 4702 ನಾನ್ ನಬಾರ್ಡ್ ಯೋಜನೆ ಅಡಿಯಲ್ಲಿ ದೇವನೂರ ಗ್ರಾಮದ ದೊಡ್ಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ದೇವನೂರ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಬ್ರಿಜ್ಡ ಕಂ ಬ್ಯಾರೇಜ್ ನಿರ್ಮಿಸಲಾಗುತ್ತಿದ್ದು, ಇದರಿಂದ ನೀರಾವರಿಗೆ ಹಾಗೂ ಕೋಲಕುಂದಾ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಬಸನಳ್ಳಿ ಗ್ರಾಮದ ಹತ್ತಿರ ಸಹಿತ ಬ್ರಿಜ್ಡ ಕಂ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ಹೇಳಿದರು. ದೇವನೂರ ಗ್ರಾಮದ ಹತ್ತಿರ ನಿರ್ಮಿಸಲಾಗುತ್ತಿರುವ ಬ್ರಿಜ್ಡ ಕಂ ಬ್ಯಾರೇಜ್ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಬ್ಯಾರೇಜ್ ನಿರ್ಮಾಣದಿಂದ ರೈತರ ಜಮೀನು ಹಾಳಾಗುತ್ತಿದ್ದರೆ ಅದನ್ನು ಭೂಸ್ವಾಧೀನಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೇಡಂ ಮತಕ್ಷೇತ್ರದಲ್ಲಿ ಯಾವುದೇ ಗ್ರಾಮಕ್ಕೂ ರಸ್ತೆ ಸಂಚಾರ ಅಡೆತಡೆ ಇರಬಾರದೆಂಬ ಉದ್ದೇಶದಿಂದ ಎಲ್ಲ ಗ್ರಾಮಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ದುಗನೂರ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ
ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಗ್ರಾಮದ ಮುಖಂಡ ಡಾ| ವೆಂಕಟರೆಡ್ಡಿ ಪಾಟೀಲ ಮಾತನಾಡಿ, ದೇವನೂರ ಗ್ರಾಮ 20 ವರ್ಷಗಳ ಹಿಂದೆ ನಡುಗಡ್ಡೆಯಾಗಿತ್ತು.
ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವುದರ ಮೂಲಕ ಇತರ ಗ್ರಾಮಗಳೊಂದಿಗೆ ಸಂಪರ್ಕ ಸಾಧ್ಯವಾಗಿದೆ. ಪ್ರಸ್ತುತ ನಿರ್ಮಿಸುತ್ತಿರುವ ಬ್ರಿಜ್ಡ ಕಂ ಬ್ಯಾರೇಜಿನಿಂದಾಗಿ ಕೋಲಕುಂದಾವಲ್ಲದೇ ಸುತ್ತಮುತ್ತಲಿನ ಎಲ್ಲ ಗ್ರಾಮಕ್ಕೂ ಸುಗಮ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು. ಕೋಲಕುಂದಾ ಜಿಪಂ ಸದಸ್ಯೆ ಶಾರದಮ್ಮ ಜಯಪಾಲರೆಡ್ಡಿ, ಹಂದರಕಿ ತಾಪಂ ಸದಸ್ಯೆ ಇಂದಿರಾದೇವಿ ಬಸವರಾಜಗೌಡ ಪೊಲೀಸ್ ಪಾಟೀಲ, ದೂಗನೂರ ಗ್ರಾಪಂ ಅಧ್ಯಕ್ಷೆ ಸರೋಜಮ್ಮ ನಾಗಲಿಂಗಪ್ಪ, ಮುಖಂಡರಾದ ಶಂಕರ ಬೋಪಾಲ ಪಾಟೀಲ, ಸಿದ್ದನಗೌಡ ಪಾಟೀಲ ಕೋಲಕುಂದಾ,
ವೆಂಕಟರೆಡ್ಡಿ ಕಡತಾಲ, ಸತೀಶರೆಡ್ಡಿ ಪಾಟೀಲ ರಂಜೋಳ, ಗುರುನಾಥರೆಡ್ಡಿ ಪಾಟೀಲ ಹೂಡಾ, ಶರಣಯ್ಯ ಕಲಾಲ, ಶರಣಗೌಡ ನಾಚವಾರ, ಜಯಪಾಲರೆಡ್ಡಿ ಪಾಟೀಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಕಲಬುರಗಿ
ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಬಿ. ಮಲ್ಲಪ್ಪ, ಸೇಡಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಎಂ. ಭಗವಂತಿ ಮತ್ತಿತರರು ಹಾಜರಿದ್ದರು.
ಬ್ರಿಜ್ಡ ಕಂ ಬ್ಯಾರೇಜ್ ನಿರ್ಮಾಣಕ್ಕೆ ಜಮೀನು ನೀಡಿದ ದೇವು ಸುತಾರ ಹಾಗೂ ಶಂಕರಪ್ಪ ಸುತಾರ ಅವರನ್ನು ಸನ್ಮಾನಿಸಲಾಯಿತು.