Advertisement

ಭಯವಿಲ್ಲ ಬದುಕು ಕಲಿಸಿದ ಅಮ್ಮ

10:56 AM Nov 27, 2018 | Team Udayavani |

ಸೇಡಂ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳು ಲಭಿಸಿದ್ದರೂ, ನನ್ನ ಕೃತಿಗೆ ಸಂದ ಮೊದಲ ಪ್ರಶಸ್ತಿ ಅಮ್ಮ ಪ್ರಶಸ್ತಿ. ನನಗೆ ಅತಿಮುಖ್ಯವಾದದ್ದು ಎಂದು ಖ್ಯಾತ ನಟ, ನಿರ್ದೆಶಕ ಪ್ರಕಾಶ ರೈ ಹೇಳಿದರು.

Advertisement

ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನ ಹಮ್ಮಿಕೊಂಡ 18ನೇ ವರ್ಷದ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಪ್ರಶಸ್ತಿಯನ್ನು ಅಮ್ಮನ ಹೃದಯವುಳ್ಳ ಎಲ್ಲರಿಗೂ ಅರ್ಪಸುತ್ತೇನೆ. ಅಮ್ಮನಿಂದ ಭಯವಿಲ್ಲದ ಬದುಕು ಕಲಿತಿದ್ದೇನೆ. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ತಾಯಿ ಋಣ ತೀರಿಸುವ ಕೆಲಸದಲ್ಲಿ ಸಾರ್ಥಕತೆ ಕಾಣುತ್ತೇನೆ. ದೇಶವನ್ನು ಬೆಳಗಿಸುವ ಏಕೈಕ ಶಕ್ತಿ ತಾಯಿ ಎಂದು ಹೇಳಿದರು.

ದೇಶದಲ್ಲಿ ಯಾರೂ ಆಳುವವರಿಲ್ಲ. ನಮ್ಮ ದುಡ್ಡಿನಿಂದ ಬರುವ ತೆರಿಗೆಯಲ್ಲಿ ದೊಡ್ಡವರೆನಿಸಿಕೊಂಡವರು ಬದುಕುತ್ತಿದ್ದಾರೆ. ಸುಂದರ ಸಮಾಜ ನಿರ್ಮಾಣವಾಗಬೇಕಾದರೆ ಪ್ರಶ್ನಿಸುವ ಪರಿಪಾಠ ಬೆಳೆಯಬೇಕು. ಪ್ರತಿಭೆ ಅಹಂಕಾರದಲ್ಲಿ ಎಂದೂ ಬೆಳೆದಿಲ್ಲ.
ಜನರ ಆಶೀರ್ವಾದ, ಪ್ರೀತಿಯಿಂದ ಚಿತ್ರರಂಗದಲ್ಲಿ ಸಾಧಿಸಿದ್ದೇನೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ,
ಸಂಗೀತ, ನಾಡು-ನುಡಿ, ಸಂಗೀತ, ಪೊಲೀಸ್‌, ಮಕ್ಕಳ ಕಲೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತ ಬಂದಿವೆ. ಇವುಗಳ ಮಧ್ಯೆ ಅಮ್ಮ ಪ್ರಶಸ್ತಿ ತನ್ನ ಹಿರಿಮೆ ಹೆಚ್ಚಿಸುಕೊಳ್ಳುತ್ತಿದೆ. ಚಲನಚಿತ್ರ, ಸಾಮಾಜಿಕ ಕ್ಷೇತ್ರಗಳ ಸೇವೆಯಲ್ಲಿ ಪ್ರಕಾಶರೈ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ| ವಿಕ್ರಮ ವಿಶಾಜಿ, ಪ್ರಕಾಶರೈ ಅವರಂತಹ ಚಿಂತನೆ ವ್ಯಕ್ತಿತ್ವವುಳ್ಳ ವ್ಯಕ್ತಿಗಳು
ರಾಜ್ಯದ ಮುಖ್ಯಮಂತ್ರಿಗಳಾಗಿ ಬಂದರೆ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಹೇಳಿದರು.

ಗುಲಬರ್ಗಾ ವಿವಿಯ ಎಚ್‌.ಟಿ. ಪೋತೆ, ಮಾಜಿ ಶಾಸಕ ಡಾ| ನಾಗರೆಡ್ಡಿ ಪಾಟೀಲ, ಪ್ರಶಸ್ತಿ ಪುರಸ್ಕೃತ ರೇಣುಕಾ ರಮಾನಂದ, ಯು.ರು. ಪಾಟೀಲ, ಶಶಿಕಾಂತ ದೇಸಾಯಿ ಮಾತನಾಡಿದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರ ವೇದಿಕೆಯಲ್ಲಿದ್ದರು. ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರೆಡ್ಡಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಗಲಿದ ನಟ ಅಂಬರೀಶ,
ಮಾಜಿ ಕೇಂದ್ರ ಜಾಫರ್‌ ಷರೀಫ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಮ್ಮ ಪ್ರಶಸ್ತಿ ಪುರಸ್ಕೃತರು ನಟ, ನಿರ್ದೇಶಕ ಪ್ರಕಾಶ ರೈ ಅವರ ಇರುವುದೆಲ್ಲವ ಬಿಟ್ಟು ಲೇಖನಗಳ ಸಂಕಲನಕ್ಕಾಗಿ, ಡಾ| ವಿಕ್ರಮ್‌ ವಿಸಾಜಿ ಅವರ ರಸಗಂಗಾಧರ ನಾಟಕ ಕೃತಿಗಾಗಿ, ರೇಣುಕಾ ರಮಾನಂದ ಅವರಿಗೆ ಮೀನುಪೇಟೆಯ ತಿರುವು ಕವನ ಸಂಕಲನಕ್ಕಾಗಿ, ಯು.ರು. ಪಾಟೀಲ ಅವರ ಬೆಳ್ಳಿ ಚುಕ್ಕಿಯ ಬಂಗಾರದ ಕನಸು ಕಾದಂಬರಿಗಾಗಿ ಮತ್ತು ಶಶಿಕಾಂತ ಪಿ. ದೇಸಾಯಿ
ಅವರ ಕಂಬಳಿಯ ಕೆಂಡ ಕಥಾ ಸಂಕಲನಕ್ಕಾಗಿ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇನ್ನು ಮುದ್ರಣ ಮಾಧ್ಯಮ ಸೇವೆಗಾಗಿ ಸ್ವಾನ್‌ ಕೃಷ್ಣ (ಅವರ ಅಪೇಕ್ಷೆ ಮೇರೆಗೆ ಅವರ ತಾಯಿಗೆ), ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ, ಮಹಿಳಾ ಸ್ವಾವಲಂಬಿ ಚಂದಮ್ಮ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಲಾಯಿತು. ನಾಗಪ್ಪ ಮುನ್ನೂರು ಸ್ಮರಣಾರ್ಥ ಬಡ ಮಹಿಳೆ ಸಾದತ್‌ ಮತ್ತು ದೇವಕಿ ಅವರಿಗೆ ಹೊಲಿಗೆ ಯಂತ್ರ ಕೊಡಲಾಯಿತು.

ಬೀಡು ಬಿಟ್ಟ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಹಿಂದೂಪರ ಮತ್ತು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಪ್ರಕಾಶರೈ ಅವರನ್ನು ತಡೆದು ವಿರೋಧಿಸಲು ಸಜ್ಜಾಗಿದ್ದ ಹಿಂದೂಪರ ಸಂಘಟನೆಗಳ ನೂರಾರು
ಕಾರ್ಯಕರ್ತರು ಸಮಾರಂಭ ನಡೆದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಎದುರು ಬೀಡು ಬಿಟ್ಟಿದ್ದರು. ಪ್ರಕಾಶರೈ ನಾಲಿಗೆ ಹರಿಬಿಟ್ಟರೆ ಪ್ರತಿಭಟಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಡಿವೈಎಸ್ಪಿ ಬಸವರಾಜ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ
ಶ್ರೀಶೈಲ, ವಾತ್ಸಲ್ಯ ನೇತೃತ್ವದ ಬಿಗಿ ಬಂದೋಬಸ್ತ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿತ್ತು. ಪ್ರಕಾಶರೈ ಬರುವ ಹೆಜ್ಜೆ ಹೆಜ್ಜೆಗೂ ಪೊಲೀಸ್‌ಗಾವಲು ಏರ್ಪಡಿಸಲಾಗಿತ್ತು.

ಪ್ರಕೃತಿಯನ್ನು ತಾಯಿ, ಭಾರತವನ್ನು ಮಾತೆ ಎಂದು ಕಲ್ಪಿಸಿಕೊಳ್ಳುವುದಕ್ಕೂ ಮಿಗಿಲಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು.  ತಪ್ಪುಗಳನ್ನು ಪ್ರಶ್ನಿಸುವ ಶಕ್ತಿಗಳಾಗಬೇಕು. ಆಗ ಮಾತ್ರ ನಿಜವಾಗಿಯು ತಾಯಿಯ ಋಣ ತೀರಿಸಿದಂತೆ.
 ಪ್ರಕಾಶ ರೈ, ನಟ, ನಿರ್ದೇಶಕ 

Advertisement

Udayavani is now on Telegram. Click here to join our channel and stay updated with the latest news.

Next