Advertisement

ಕೇಂದ್ರ ಸರ್ಕಾರಕ್ಕೆ ಸಂವಿಧಾನವೇ ಧರ್ಮ ಗ್ರಂಥ

12:22 PM Apr 15, 2018 | |

ಬೆಂಗಳೂರು: ದೇಶಕ್ಕಿರುವ ಒಂದೇ ಧರ್ಮ ಗ್ರಂಥ ಅದು ಸಂವಿಧಾನ, ಕೇಂದ್ರ ಸರ್ಕಾರಕ್ಕೆ ಸಂವಿಧಾನವೇ ಧರ್ಮ ಗ್ರಂಥ ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿರಲು ಅಂಬೇಡ್ಕರ್‌ ನೀಡಿರುವ ಸಂವಿಧಾನ ಕಾರಣ ಎಂದು ಹೇಳಿದರು.

ಕೇಂದ್ರ ಸರ್ಕಾರ ದಲಿತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಜಯಪ್ರಕಾಶ್‌ ನಾರಾಯಣರ ಆಂದೋಲನದ ಕಾಲದಿಂದ ಕೆಲಸ ಮಾಡಿದ ರಾಮನಾಥ್‌ ಕೋವಿಂದ್‌ ಆವರನ್ನು ರಾಷ್ಟ್ರಪತಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ತೀರ್ಮಾನ ಕೈಗೊಂಡರು ಎಂದು ತಿಳಿಸಿದರು.

ಅಂಬೇಡ್ಕರ್‌ ಅವರು “ಎ ಪ್ರಾಬ್ಲಿಂ ಆಫ್ ರುಪಿ’ ಎಂಬ ಗ್ರಂಥದಲ್ಲಿ ನೋಟು ಅಪನಗದೀಕರಣದ ಬಗ್ಗೆ ಉಲ್ಲೇಖೀಸಿದ್ದಾರೆ. 20 ವರ್ಷಕ್ಕೊಮ್ಮೆ ನೋಟು ಬದಲಾವಣೆ ಆಗಬೇಕು  ಇಂದರಿಂದ ಕಪ್ಪು ಹಣ ತೊಲಗಲು ಸಾಧ್ಯ ಎಂದು ಅವರ ಪುಸ್ತಕದಲ್ಲೇ ಉಲ್ಲೇಖವಿದೆ. ಹೀಗಾಗಿ, ಮೋದಿಯವರು ನೋಟು ಅಪನಗದೀಕರಣ ಮಾಡುವ ಮೂಲಕ ಅಂಬೇಡ್ಕರ್‌ ಆಶಯ  ಈಡೇರಿಸಿದರು ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್‌ ಅವರಿಗೆ ಲೋಕಸಭೆ ಪ್ರವೇಶಿಸಲು ಕಾಂಗ್ರೆಸ್‌ ಅವಕಾಶ ಮಾಡಿಕೊಡಲಿಲ್ಲ. ಕಾಂಗ್ರೆಸ್‌ ಅಂಬೇಡ್ಕರ್‌ ಅವರಿಗೆ ಗೌರವ ಕೊಡಲಿಲ್ಲ ಎಂದು ಹೇಳಿದರು.

Advertisement

  ಅಂಬೇಡ್ಕರ್‌ ಅವರಿಗೆ ಗೌರವ ಕೊಡದ ಕಾಂಗ್ರೆಸ್‌ನವರಿಗೆ ದಲಿತರ ಬಗ್ಗೆ ಮಾತಾಡೋ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದ ಅವರು, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ಸಮನ್ವಯತೆ ಸಾಧಿಸುವ ಸಂವಿಧಾನ ನಮಗೆ ಅಂಬೇಡ್ಕರ್‌ ನೀಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿ ಪವಿತ್ರವಾದ ದಿನ ನಾವೆಲ್ಲರೂ ಸದಾ ನೆನಪಿನಲ್ಲಿಡಬೇಕಾದ ದಿನ ಎಂದು ತಿಳಿಸಿದರು.

ಸಮಾನತೆಯ ಪರಿಕಲ್ಪನೆ ಅತ್ಯಂತ ಯಶಸ್ವಿಯಾಗಿ ಅನುಷ್ಟಾನ ಮಾಡಿದವರು ಅಂಬೇಡ್ಕರ್‌. ಪ್ರತಿಯೊಬ್ಬ ವ್ಯಕ್ತಿಗೆ ಆತ್ಮಗೌರವ ಪ್ರಾಪ್ತಿ ಆದಾಗ ಮಾತ್ರ ಒಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಹೇಳಿದರು. ಕೆ.ಶಿವರಾಮ್‌ ಮಾತನಾಡಿ, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮನೆಯಲ್ಲಿ ಅಂಬೇಡ್ಕರ್‌ ಫೋಟೋ ಹಾಕಿಕೊಳ್ಳಬೇಕು.  ಅಂಬೇಡ್ಕರ್‌ ಕೃತಿಗಳನ್ನು ಓದಬೇಕು ಎಂದು ಪ್ರಧಾನಿ ನರೇಂದ್ರಮೋದಿಯವರ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಹೇಳಿದರು.

ದೌರ್ಜನ್ಯ ತಡೆ ಕಾಯ್ದೆ ಬಲಹೀನಗೊಂಡಿದೆ. ಇಂತಹ ಅನ್ಯಾಯ ತಪ್ಪಿಸಬೇಕಾದರೆ ನ್ಯಾಯಾಂಗದಲ್ಲೂ ಮೀಸಲಾತಿ ಜಾರಿಯಾಗಬೇಕು. ಈ ಸಂಬಂಧ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು. ಈಗಲೂ ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಮುಖಂಡರಾದ ರವಿಕುಮಾರ್‌, ಅಬ್ದುಲ್‌ ಅಜೀಂ, ಮುನಿಕೃಷ್ಣ, ಚಿ.ನಾ.ರಾಮು ಮತ್ತಿತರರು ಉಪಸ್ಥಿತರಿದ್ದರು.

ಇಂಡಿಯಾ ಟುಡೆ ಕಾರ್ವಿ ಸಮೀಕ್ಷೆಯಲ್ಲಿ ಹೇಳಿರುವಂತೆ ಫ‌ಲಿತಾಂಶ ಬರುವುದಿಲ್ಲ. ರಾಜ್ಯದ ಜನರ ನಾಡಿಮಿಡಿತ ಏನು ಅಂತ ನಮಗೆ ಗೊತ್ತಿದೆ. ಬಿಜೆಪಿ 150 ಸೀಟು ಗೆಲ್ಲಲಿದೆ.  ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next