Advertisement

ಸಮಸ್ಯೆಗಳಿಗೆ ಸಂವಿಧಾನ ಕಾರಣವೇ ಅಲ್ಲ

01:01 PM Dec 11, 2018 | Team Udayavani |

ದಾವಣಗೆರೆ: ಮಾನವ ಹಕ್ಕುಗಳು ವಸಾಹತು ಮತ್ತು ಸಾಮ್ರಾಜ್ಯಶಾಹಿ ಕೊನೆಗಾಣಿಸುವಲ್ಲಿ ಪರಿಣಾಮಕಾರಿ ಕೆಲಸ ಮಾಡಿವೆ ಎಂದು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿದರು. ಸೋಮವಾರ ಆರ್‌.ಎಲ್‌. ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಸಂವಿಧಾನ ಓದು ಅಭಿಯಾನ ಉದ್ಘಾಟಿಸಿ ಮಾತನಾಡಿದರು.

Advertisement

ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಬೆಳೆದಂತಹ ಪ್ರತಿ ಹೆಜ್ಜೆಯ ಹಿಂದೆ ಮಾನವ ಹಕ್ಕುಗಳ ಕೊಡುಗೆ ಅಪಾರವಾಗಿದೆ. ಮಹಿಳೆ, ಮಕ್ಕಳ ಸ್ಥಿತಿ ಮತ್ತು ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬರು ಅನುಭವಿಸಲು ಮಾನವ ಹಕ್ಕುಗಳು ಸಹಕಾರಿಯಾಗಿವೆ. ಜಗತ್ತಿನಾದ್ಯಂತ 70 ವರ್ಷಗಳಲ್ಲಿ
ಯಾವುದಾದರೊಂದು ಸಿದ್ಧಾಂತ ಜನರ ಮನ್ನಣೆ ಗಳಿಸಿದೆ ಎಂದರೆ ಅದು ಮಾನವ ಹಕ್ಕುಗಳ ಸಿದ್ಧಾಂತ ಮಾತ್ರ ಎಂದು ತಿಳಿಸಿದರು.

ಜಗತ್ತಿನಲ್ಲಿ ನಡೆದ ಅನೇಕ ಯುದ್ಧಗಳಲ್ಲಿ ಸಾಕಷ್ಟು ಜನರು ಪ್ರಾಣ ತೆತ್ತಿದ್ದಾರೆ. ಈ ರೀತಿಯ ಯುದ್ಧಗಳು ಸಂಭವಿಸದಂತೆ ತಡೆದು ಶಾಂತಿ ನೆಲೆಸಲಿ ಎಂಬ ಕಾರಣಕ್ಕೆ 1945ರಲ್ಲಿ ವಿಶ್ವಸಂಸ್ಥೆ ಸ್ಥಾಪನೆ ನಂತರ 1948 ಡಿ.10 ರಂದು ಮಾನವ ಹಕ್ಕುಗಳ ಘೋಷಣೆ ಮಾಡಲಾಯಿತು ಎಂದು ಹೇಳಿದರು. 

ಭಾರತೀಯ ಸಂವಿಧಾನ ರಚನೆಯಲ್ಲಿ ಮಾನವ ಹಕ್ಕುಗಳ ಪ್ರಭಾವವಿತ್ತು. ಹಾಗಾಗಿ ಸಂವಿಧಾನದಲ್ಲಿ ಮಾನವ ಹಕ್ಕುಗಳನ್ನು ಅಳವಡಿಸಲಾಗಿದೆ. ಅದರಿಂದಾಗಿಯೇ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆ ಕಾಣಬಹುದು. ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳು ಎಲ್ಲವೂ ಕೂಡ ಮಾನವ ಹಕ್ಕುಗಳು ಎಂದು ತಿಳಿಸಿದರು. 

ಪ್ರಸ್ತುತ ರಾಜಕಾರಣದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಭಯೋತ್ಪಾದನೆ, ಅಪರಾಧ, ಕೋಮುವಾದ, ಭ್ರಷ್ಟಾಚಾರ, ಅತಿಯಾದ ವ್ಯಾಪಾರೀಕರಣ, ಸಾಂಸ್ಕೃತಿಕ ದಿವಾಳಿತನ ನಮ್ಮನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸಬಹುದು. ಆದರೆ, ಕೆಲವರು ಈ
ಸಮಸ್ಯೆಗಳಿಗೆ ಭಾರತೀಯ ಸಂವಿಧಾನ ಕಾರಣ ಎನ್ನುತ್ತಿದ್ದಾರೆ. ಅದು ಅವರ ತಪ್ಪು ತಿಳಿವಳಿಕೆ. ಅವರು ಸಂವಿಧಾನ ಸರಿಯಾಗಿ ಓದಿ ಅರ್ಥ ಮಾಡಿಕೊಂಡಿಲ್ಲ ಎಂದರ್ಥ. ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ. ಅಂತಹ ಭಾರತೀಯ ಸಂವಿಧಾನವನ್ನ ಉಳಿಸೋಣ. ಏಕೆಂದರೆ
ಇದನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ಹೋಗುತ್ತದೆ ಎಂದು ಎಚ್ಚರಿಸಿದರು. 

Advertisement

ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತರುವ ಮೂಲಕ ಜಗತ್ತಿನ 10 ಬಲಿಷ್ಠ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಸಾಮಾನ್ಯ ಜನರಿಗೂ ಮೂಲ ಸೌಕರ್ಯ ಒದಗಿಸುವುದಕ್ಕೆ ಪ್ರಯತ್ನ ನಡೆದಿದೆ. ಜಾತಿ ವ್ಯವಸ್ಥೆಯಲ್ಲಿ ರೈತರ ಮಕ್ಕಳು ರೈತರು ಆಗಬೇಕೆನ್ನುವ ಕುರಿತು ಒಂದಿಷ್ಟು ಬದಲಾವಣೆ ತರುವ ಮೂಲಕ ಸುಧಾರಣೆ ಕಂಡುಕೊಳ್ಳಲಾಗಿದೆ ಎಂದರು.

ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಂರಿಗೆ ಕುರಾನ್‌, ಕ್ರೈಸ್ತರಿಗೆ ಬೈಬಲ್‌, ಬೌದ್ಧರಿಗೆ ಬುದ್ಧರ ಬೋಧನೆಗಳು, ಸಿಖ್‌ರಿಗೆ ಗುರುಗೋವಿಂದ್‌ ಗ್ರಂಥವಿದೆ. ಅದೇ ಮಾದರಿಯಲ್ಲಿ ಎಲ್ಲಾ ಭಾರತೀಯರಿಗೂ ಸಂವಿಧಾನ ಒಂದೇ ಮಹಾಗ್ರಂಥವಾಗಿದೆ. ಎಲ್ಲರನ್ನು ಒಟ್ಟಾಗಿ ಕಟ್ಟಿಹಾಕಿದಂತಹ ಗ್ರಂಥವೆಂದರೆ ಭಾರತ ಸಂವಿಧಾನ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಎಂಜಿಸಿ ಕಾಲೇಜು ಪ್ರಾಧ್ಯಾಪಕ ಡಾ| ವಿಠ್ಠಲ್‌ ಭಂಡಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌, ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ ಕುಮಾರ್‌, ಕೆ. ಮಹಾಂತೇಶ್‌, ಕಾಲೇಜು ಪ್ರಾಚಾರ್ಯ ಪ್ರೊ| ಬಿ.ಎಸ್‌. ರೆಡ್ಡಿ , ಎಂ. ಸೋಮಶೇಖರಪ್ಪ ಇತರರು ಇದ್ದರು.

ಮಾನವ ಹಕ್ಕುಗಳ ಕೊಡುಗೆ ಅನನ್ಯ ದೇಶದಲ್ಲಿ ಹಿಂಸೆ, ಕೌರ್ಯ, ಅಪರಾಧಗಳ ತಡೆಯುವಲ್ಲಿ ಮಾನವ ಹಕ್ಕುಗಳ ಕೊಡುಗೆ ಅನನ್ಯ. ಹಾಗಾಗಿಯೇ ಜಗತ್ತಿನ 198 ರಾಷ್ಟ್ರಗಳ ಪೈಕಿ 193 ರಾಷ್ಟ್ರಗಳು ವಿಶ್ವಸಂಸ್ಥೆಯ ಕರಾರಿಗೆ ಸಹಿ ಹಾಕಿ ಎಲ್ಲಾ ದೇಶಗಳಲ್ಲಿ ಮಾನವ ಹಕ್ಕುಗಳ ಜಾರಿ ಮಾಡುವ
ಪ್ರಯತ್ನ ನಡೆಯುತ್ತಿದೆ. ಆದರೆ, ನಾವುಗಳಿಂದು ಮಾನವ ಹಕ್ಕುಗಳನ್ನು ಯಾವ ರೀತಿ ಸಂರಕ್ಷಿಸುತ್ತಿದ್ದೇವೆ, ಹಕ್ಕುಗಳ ಉಲ್ಲಂಘನೆ ಆದಲ್ಲಿ ಯಾವ ರೀತಿ ಪಾತ್ರ ವಹಿಸುತ್ತಿದ್ದೇವೆ ಎಂಬುದರ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕಿದೆ. 
 ಎಚ್‌.ಎನ್‌. ನಾಗಮೋಹನ್‌ ದಾಸ್‌, ವಿಶ್ರಾಂತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next