ದೇವನಹಳ್ಳಿ: ಭಾರತದಲ್ಲಿರುವ ಎಲ್ಲಾ ಧರ್ಮ, ಜಾತಿ, ಜನಾಂಗದವರಿಗೂ ಸಮ ಪಾಲು ಸಮ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತದ ಸಂವಿಧಾವನ್ನು ರಚಿಸಲಾಗಿದೆ.ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕು ನೀಡಲಾಗಿದೆ. ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಸದುಪಯೋಪಡಿಸಿಕೊಂಡು ಉತ್ತಮ ಪ್ರಜೆಯಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಅರ್ಪಣ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಭೋದಿಸಿ ಅವರು ಮಾತನಾಡಿದರು. ಸಂವಿಧಾನ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ದೇಶದ ಪವಿತ್ರ ಗ್ರಂಥವಾಗಿದೆ. ಅದು ಯಾವುದೇ ಜಾತಿ,ಧರ್ಮಕ್ಕೆ ಸಿಮೀತವಲ್ಲ.ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರು ಯಾವುದೇ ಒಂದು ಧರ್ಮ, ಜಾತಿಗೆ ಪ್ರಾಮುಖ್ಯತೆ ನೀಡದೇ, ಸರ್ವರಿಗೂ ಸಮಾನ ಅವಕಾಶ ನೀಡಿದ್ದಾರೆ.ಅವರೊಬ್ಬ ಮಹಾನ್ ಮಾನವತಾವಾದಿ ಎಂದರು.
ಅಂಬೇಡ್ಕರ್ ಅವರು ರಚಿಸಿದ ಆಶಯಗಳು, ಅವರ ಉದ್ದೇಶ ದೇಶದ ಕಟ್ಟ ಕಡೆಯ ಪ್ರಜೆಗು ತಲುಪಬೇಕು.ಅದನ್ನು ತಲುಪಿಸುವ ಕಾರ್ಯವಾಗಬೇಕು.ಅಂಬೇಡ್ಕರ್ ನಡೆದು ಬಂದ ಪ್ರತಿ ಹೆಜ್ಜೆಯನ್ನು ಶೋಷಿತ ಸಮುದಾಯದವರೂ ಅನುಸರಿಸಲೇ ಬೇಕು.ವಿಶ್ವದ 50 ಸಾವಿರಕ್ಕೂ ಹೆಚ್ಚು ಪುಸ್ತಕ, ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನ ರಚಿಸಿದ್ದಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯಕ್ ಮಾತನಾಡಿ, ಮಹಿಳೆಯರಿಗೆ ಸಂವಿಧಾನದಲ್ಲಿ ಹೆಚ್ಚಿನ ಕಾನೂನುಗಳನ್ನು ರೂಪಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಆಗಿದ್ದಾರೆ. ಪ್ರತಿ ಒಬ್ಬರಿಗೂ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಸಶಕ್ತನಾಗಬೇಕು. ಸಮಾನತೆ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯವೇ ದೇಶದ ಮಂತ್ರವಾಗಬೇಕೆಂಬುವ ಉದ್ದೇಶದೊಂದಿಗೆ ಭಾರತೀಯ ಸಂವಿಧಾನ ರಚನೆಯಾಗಿದೆ.
1949ರ ನ.26ರಂದು ಇಡೀ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಮತ್ತು ದೊಡ್ಡ ಸಂವಿಧಾನವೆಂದೇ ಕರೆಸಿಕೊಂಡಿರುವ ಸಂವಿಧಾನವನ್ನು ಒಪ್ಪಿದ ದಿನವಾಗಿದೆ. ಸಂವಿಧಾನದ ಆಶಯಗಳಾದ ಸರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಪ್ರಭುತ್ವ ಮತ್ತು ಗಣತಂತ್ರ ಅಂಶಗಳ ಬಗ್ಗೆ ವಿವರಣೆ ನೀಡಲಾಗಿದೆ ಎಂದರು. ಈ ವೇಳೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.