Advertisement

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

12:22 AM Apr 15, 2024 | Team Udayavani |

ಕಾರ್ಕಳ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಪ್ರಧಾನಿಯಾಗಿಸಿದ್ದು ಅಲ್ಲದೆ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಕೀರ್ತಿ ಇರುವುದು ಹಿಂದಿನ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ.

Advertisement

ಈಗ ಆ ಕ್ಷೇತ್ರ ಉಡುಪಿ ಜತೆ ಸೇರಿಕೊಂಡಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವಾಗುವ ಮುನ್ನ ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ ಚಿಕ್ಕಮಗಳೂರಿನೊಂದಿಗೆ ಸೇರಿತ್ತು. ಉಡುಪಿ, ಬೈಂದೂರು ಉಳಿದ ಕ್ಷೇತ್ರಗಳು ಶಿವಮೊಗ್ಗಕ್ಕೆ ಸೇರಿದ್ದವು. 1978ರ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉಪಚುನಾವಣೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಏಕೆಂದರೆ 1977ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸೋಲು ಕಂಡಿದ್ದರು. ಅವರ ರಾಜಕೀಯ ಭವಿಷ್ಯ ಕೊನೆಗೊಂಡಿತು ಎಂದು ದೇಶದಜನ ಭಾವಿಸಿದ್ದರು. ಅವರು ದೇಶದ ಪ್ರಧಾನಿ ಯಾಗಬೇಕೆಂಬ ಕೋಟ್ಯಂತರ ಕಾಂಗ್ರೆಸ್‌ ಕಾರ್ಯ ಕರ್ತರ ಆಸೆಗೂ ಅದು ತಣ್ಣೀರು ಎರಚಿತ್ತು.

ಆಗ ಚಿಕ್ಕಮಗಳೂರು ಕ್ಷೇತ್ರದ ಸಂಸದ ಆಗಿದ್ದವರು ಡಿ.ಬಿ. ಚಂದ್ರೇಗೌಡರು. ಇಂದಿರಾಗಾಂಧಿ ಪ್ರಧಾನಿಯಾಗಿಸುವ ಸಲುವಾಗಿ ಅವರು ತಮ್ಮ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಥಾನ ತ್ಯಾಗ ಮಾಡಿದ್ದರು. ಉಪಚುನಾವಣೆ ನಡೆದು ಇಂದಿರಾ ಗಾಂಧಿ ಅಭೂತಪೂರ್ವ ಜಯಗಳಿಸಿ ದೇಶದ ಪ್ರಧಾನಿಯಾದರು. ಇದು ರಾಷ್ಟ್ರ- ರಾಜಕಾರಣದಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿತ್ತು. ಹಾಗಾಗಿ ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರ ಈ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ.

1952ರಲ್ಲಿ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಸಂದರ್ಭ ಚಿಕ್ಕಮಗಳೂರು ಜಿಲ್ಲೆ ಹಾಸನ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿತ್ತು. 1967ರಲ್ಲಿ ಕ್ಷೇತ್ರ ಪುನರ್ವಿಂ ಗಡಣೆಯಾದ ಬಳಿಕ ಹಾಸನ ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ವಿಂಗಡಣೆಯಾಯಿತು. 2009ರಲ್ಲಿ ಮತ್ತೆ ನಡೆದ
ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಚಿಕ್ಕಮಗ ಳೂರು ಹಾಗೂ ಉಡುಪಿ ಜಿಲ್ಲೆಗಳನ್ನೊಳ ಗೊಂಡ ಕ್ಷೇತ್ರದ ಉದಯವಾಯಿತು. ಪ್ರಸ್ತುತಉಡುಪಿ ಜಿಲ್ಲೆಯ ಕಾಪು, ಕಾರ್ಕಳ, ಕುಂದಾಪುರ, ಉಡುಪಿ ವಿಧಾನಸಭೆ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ತರೀಕೆರೆ ಹಾಗೂ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರಗಳು ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಒಳಗೊಂಡಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಗೆಲುವಿನ ಸಾಧನೆ ಮಾಡಿದ್ದರು. 1984ರಲ್ಲಿ ಮೂಡಿಗೆರೆಯ ಡಿ.ಕೆ ತಾರಾದೇವಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದರು. 2014ರ ಚುನಾವಣೆಯಲ್ಲಿ ಕರಾವಳಿ ಮೂಲದ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾದ 2ನೇ ಮಹಿಳಾ ಸಂಸದೆ. ಇಂದಿರಾಗಾಂಧಿ ಹೊರತು ಪಡಿಸಿ ಈ ಇಬ್ಬರು ಮಹಿಳೆಯರು ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿದ್ದರು.

Advertisement

1952ರಿಂದ 1996ರ ಲೋಕಸಭೆ ಚುನಾ ವಣೆವರೆಗೆ ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿತ್ತು. 1998ರ ಚುನಾವಣೆ ಬಳಿಕ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಡಿ.ಸಿ ಶ್ರೀಕಂಠಪ್ಪ ಅವರು ಗೆಲುವು ದಾಖಲಿಸಿದ ಬಳಿಕ ಕಾಂಗ್ರೆಸ್‌ನ ಭದ್ರಕೋಟೆ ಎಂಬ ಹಣೆಪಟ್ಟಿಯಿಂದ ಕಳಚಿಕೊಂಡಿದೆ. ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ 3 ಬಾರಿ ಸಂಸದರಾಗಿದ್ದರು. ಬಳಿಕ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಸದಾನಂದಗೌಡ ಆಯ್ಕೆಯಾದರು. ಅನಂತರದಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗಡೆ ಆಯ್ಕೆಯಾಗಿದ್ದರು. 2014, 2019ರ ಬಿಜೆಪಿಯ ಶೋಭಾ ಕರಂದ್ಲಾಜೆ ಸತತ 2 ಬಾರಿ ಸಂಸದೆಯಾಗಿ ಆಯ್ಕೆಯಾದರು.

1952, 1957ರಲ್ಲಿ ಹಾಸನ ಚಿಕ್ಕಮಗ ಳೂರು ಕ್ಷೇತ್ರ ಅಸ್ತಿತ್ವದಲ್ಲಿತ್ತು. ಆ ಎರಡೂ ಅವಧಿಗೆ ಹಾಸನ ಜಿಲ್ಲೆಯ ಸಿದ್ದನಂಜಪ್ಪ ಆಯ್ಕೆ ಯಾಗಿದ್ದರು. 1957ರ ಚುನಾವಣೆಯಲ್ಲಿ ಸಿದ್ದನಂಜಪ್ಪ ಅವಿರೋಧವಾಗಿ ಆಯ್ಕೆ ಯಾಗಿ ದೇಶದ ಗಮನ ಸೆಳೆದಿದ್ದರು. 1967ರ ಬಳಿಕ ಕ್ಷೇತ್ರದಲ್ಲಿ ಮಲೆನಾಡಿನ ರಾಜ ಕಾರಣಿಗಳದ್ದೇ ಪಾರುಪತ್ಯವಾಗಿತ್ತು. ಉಡುಪಿ, ಚಿಕ್ಕಮಗಳೂರು ಕ್ಷೇತ್ರವಾಗಿ ವಿಂಗಡಣೆ ಬಳಿಕ ಕರಾವಳಿಯವರನ್ನೆ ಮತದಾರರು ಆಯ್ಕೆ ಮಾಡುತ್ತಿರುವುದು ವಿಶೇಷವಾಗಿದೆ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next