Advertisement
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್-ಜೆಡಿಎಸ್ ನಾಯಕರು ಸೋಮವಾರ ಹುಣಸೂರು ಕ್ಷೇತ್ರದಲ್ಲಿ ಬೆಳಗ್ಗೆ 9ಗಂಟೆಗೆ ಜೆಡಿಎಸ್ ಸಭೆ, 11ಗಂಟೆಗೆ ಅದೇ ಸ್ಥಳದಲ್ಲಿ ಎರಡೂ ಪಕ್ಷದ ಜಂಟಿ ಸಭೆ ನಡೆಸುವುದರೊಂದಿಗೆ ಜಂಟಿ ಪ್ರಚಾರ ಆರಂಭಿಸುವುದಾಗಿ ಮುಖಂಡರು ಹೇಳಿದರು.
Related Articles
Advertisement
ಕೇಂದ್ರದಲ್ಲಿ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್, ರಾಜ್ಯದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಈ ಭಾಗದ ರಸ್ತೆ ಅಭಿವೃದ್ಧಿಗೆ , ಮೈಸೂರು ಭಾಗದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಸಚಿವರಾಗಿ ಡಾ.ಎಚ್.ಸಿ.ಮಹದೇವಪ್ಪ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ನಮ್ಮ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಎಲ್ಲರೊಂದಿಗೆ ಸ್ನೇಹ, ವಿಶ್ವಾಸದಿಂದ ಕೆಲಸ ಮಾಡುವ ವ್ಯಕ್ತಿ. ಚಾಮರಾಜ ನಗರ ಕ್ಷೇತ್ರದ ಅಭ್ಯರ್ಥಿಯಾಗಿರುವ ಆರ್.ಧ್ರುವನಾರಾಯಣ್ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಎರಡೂ ಪಕ್ಷಗಳವರು ಸೇರಿ ಎಲ್ಲ ಜಾತಿ, ಧರ್ಮ, ಜನಾಂಗದವರನ್ನು ಒಟ್ಟಾಗಿ ಕರೆದೊಯ್ಯುತ್ತೇವೆ. ಗೊಂದಲ, ಗೋಜಲು ನಿವಾರಿಸಿಕೊಂಡು ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಸವಾಲು: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎರಡೂ ಪಕ್ಷಗಳ ನಾಯಕರ ನಡುವೆ ಸಂಪರ್ಕ ಕೊರತೆಯಿಂದ ಹಿಂದೆ ಕರೆದಿದ್ದ ಜಂಟಿ ಸುದ್ದಿಗೋಷ್ಠಿ ಸಾಧ್ಯವಾಗಿರಲಿಲ್ಲ. ಈಗ ನಮಗೆ ರಾಜಕೀಯ ಸ್ಪಷ್ಟತೆ ಬಂದಿದೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನಮ್ಮ ರಾಜಕೀಯ ಎದುರಾಳಿ, ಹತ್ತಾರು ವರ್ಷಗಳಿಂದ ವೈರುಧ್ಯ, ಸಂಘರ್ಷ ಮಾರ್ಗದಲ್ಲಿ ರಾಜಕೀಯ ಮಾಡಿದರೂ ಕೋಮುಶಕ್ತಿಯನ್ನು ಅಧಿಕಾರದಿಂದ ದೂರವಿಡಲು ಒಟ್ಟಾಗಿ ಹೋಗುತ್ತಿದ್ದೇವೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಒಟ್ಟಾಗಿ ಕೆಲಸ ಮಾಡಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಉದ್ಧಟತನ: ನಮ್ಮ ವಿರೋಧಿ ಅಭ್ಯರ್ಥಿ, ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಮಾಡಿದ ಕೆಲಸವನ್ನೆಲ್ಲಾ ನನ್ನ ಸಾಧನೆ ಎಂದು ಪುಸ್ತಕ ಪ್ರಿಂಟ್ ಹಾಕಿಸಿಕೊಂಡು ಹೊರಟಿದ್ದಾರೆ. ಯಾರೋ ಮಾಡಿದ ಕೆಲಸವನ್ನು ನಾವು ಮಾಡಿದ್ದು ಅನ್ನುವ ಉದ್ಧಟತನ, ವಾಚಾಳಿತನ ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೆಸರೇಳದೆ ತಿರುಗೇಟು ನೀಡಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಈ ಚುನಾವಣೆಗೆ ಇವರಿಬ್ಬರೂ ಒಂದಾಗುತ್ತಾರಾ ಎಂಬ ಸಂದೇಹ ಕೆಲವರಿಗಿದೆ. ಆದರೆ, ಜೆಡಿಎಸ್‌ನಲ್ಲಿದ್ದ ಅನೇಕರು ಕಾಂಗ್ರೆಸ್‌ನಲ್ಲಿರುವುದರಿಂದ ನಮ್ಮ ಮನಸ್ಸುಗಳು ಒಂದಾಗುವುದು ದೊಡ್ಡ ವಿಷಯವೇನಲ್ಲ ಎಂದರು.
ಜೆಡಿಎಸ್ ಕ್ರಮ: ಮಂಡ್ಯ ಕ್ಷೇತ್ರದ ಗೆಲುವು ಜೆಡಿಎಸ್‌ನ ಅಸ್ತಿತ್ವದ ಪ್ರಶ್ನೆ, ಮೈಸೂರು-ಕೊಡಗು ಕ್ಷೇತ್ರದ ಗೆಲುವು ಕಾಂಗ್ರೆಸ್ ಪಕ್ಷದ ಅಸ್ತಿತ್ವದ ಪ್ರಶ್ನೆ. ಅದಕ್ಕಾಗಿ ಭಿನ್ನಾಭಿಪ್ರಾಯಬಿಟ್ಟು ಒಟ್ಟಾಗಿ ಕೆಲಸ ಮಾಡಬೇಕು. ಪಕ್ಷದ ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಜೆಡಿಎಸ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ. ಕಾಂಗ್ರೆಸ್ ಕೂಡ ಈ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಚಾಮರಾಜ ನಗರ ಕ್ಷೇತ್ರದ ಅಭ್ಯರ್ಥಿ ಆರ್.ಧ್ರುವನಾರಾಯಣ್, ಕಾಂಗ್ರೆಸ್ ಶಾಸಕರಾದ ತನ್ವೀರ್‌ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಜೆಡಿಎಸ್ ಶಾಸಕರಾದ ಅಶ್ವಿನ್‌ಕುಮಾರ್, ಕೆ.ಮಹದೇವ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್‌ನ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಸೇರಿದಂತೆ ಎರಡೂ ಪಕ್ಷಗಳ ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಗರ ಮತ್ತು ಜಿಲ್ಲಾ ಅಧ್ಯಕ್ಷರು ಜಂಟಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯಶಂಕರ್, ಧ್ರುವ ಜೋಡೆತ್ತು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಸೌಮ್ಯ ವ್ಯಕ್ತಿ ಹಾಗೂ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಆರ್, ಧ್ರುವನಾರಾಯಣ್ ಒಳ್ಳೆಯ ಕೆಲಸಗಾರ, ಇವರಿಬ್ಬರೂ ನಮ್ಮ ಜೋಡೆತ್ತು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬಣ್ಣಿಸಿದರು.
ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಪರಿಚಯವೇ ಇಲ್ಲದ ವ್ಯಕ್ತಿಯನ್ನು ಕರೆತಂದು 15 ದಿನಗಳಲ್ಲಿ ಗೆಲ್ಲಿಸಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಗೆಲುವಿಗೆ ಶ್ರಮಿಸೋಣ, ಮೈಸೂರು ಕ್ಷೇತ್ರದ ಮೂಲಕ ಇಡೀ ರಾಜ್ಯಕ್ಕೆ ಈ ಸಂದೇಶ ಹೋಗಬೇಕು ಎಂದು ಹೇಳಿದರು.