ಕೊಪ್ಪಳ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣವು ತನಿಖೆಯ ಹಂತದಲ್ಲಿದೆ. ತನಿಖೆಯ ನಂತರ ಎಲ್ಲ ಸತ್ಯವೂ ಹೊರ ಬರಲಿದೆ. ಇದರಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದು ತಿಳಿಯಲಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ತಾಲೂಕಿನ ಹಿರೇ ಬೊಮ್ಮನಾಳದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಶ್ವರಪ್ಪ ಅವರ ರಾಜೀನಾಮೆಗೂ ಬಿಜೆಪಿ ಕಾರ್ಯಕಾರಿಣಿಗೂ ಯಾವುದಕ್ಕೂ ಸಂಬಂಧವಿಲ್ಲ. ಈ ಹಿಂದೆ ಬೆಳಗಾವಿ ಶಾಸಕರ ಪ್ರಕರಣದ ಹಿಂದೆ ಯಾರೆಲ್ಲ ಇದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದ ಹಿಂದೆಯೂ ಯಾರಿದ್ದಾರೋ ತನಿಖೆಯಲ್ಲಿ ಗೊತ್ತಾಗಲಿದೆ ಎಂದರು.
ಬಿಜೆಪಿ ವಿಸರ್ಜನೆ ಮಾಡಬೇಕು ಎನ್ನುವ ಕಾಂಗ್ರೆಸ್ ಹೇಳಿಕೆಯ ವಿಚಾರಕ್ಕೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ವಿಸರ್ಜನೆಯಾಗುವ ಹಂತದಲ್ಲಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ನೇರವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪರೋಕ್ಷವಾಗಿ ಹುನ್ನಾರ ನಡೆಸುತ್ತಿದೆ. ಬಿಜೆಪಿಯೂ ಇಂತವುಗಳನ್ನು ಎದುರಿಸಲು ಸಜ್ಜಾಗಿದೆ ಎಂದರು.
ಮುಂದೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ. ಹೊಸಪೇಟೆಯಲ್ಲಿ ಕಾರ್ಯಕಾರಣಿ ನಡೆಯುವ ವಿಚಾರ, ಅದು ಪಕ್ಷದ ಆಂತರಿಕ ವಿಚಾರ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಕಾರ್ಯಕಾರಣಿ ನಡೆಯುತ್ತಿದೆ. ಬಿಜೆಪಿ ಯಾವುದೇ ವ್ಯಕ್ತಿ ಆಧಾರಿತ ಚಟುವಟಿಕೆ ನಡೆಸುತ್ತಿಲ್ಲ. ಪಕ್ಷದ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ ಎಂದರು.
ಈ ವೇಳೆ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ ಸೇರಿ ಇತರರು ಇದ್ದರು.