ಮೈಸೂರು: ಜನತೆ ನೀಡಿದ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ, ಕಳೆದ ಐದು ವರ್ಷ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ನವರು ರಾಜಕೀಯ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ, ರಾಜ್ಯದ ತುಂಬಾ ಓಡಾಡುತ್ತಿದ್ದಾರೆಯೇ ವಿನಃ ಒಂದೆ ಒಂದು ಭ್ರಷ್ಟಾಚಾರವನ್ನು ಸಾಬೀತು ಮಾಡಲಾಗಿಲ್ಲ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಹೂಟಗಳ್ಳಿ, ಕೂರ್ಗಳ್ಳಿ, ಹೌಸಿಂಗ್ ಬೋಡ್ ಕಾಲೋನಿ, ಬೆಳವಾಡಿ ಬಸವನಪುರ, ಸಾಹುಕಾರಹುಂಡಿ, ದಾಸನಕೊಪ್ಪಲು, ಸಿದ್ದಲಿಂಗಪುರ, ನಾಗನಹಳ್ಳಿಗಳಲ್ಲಿ ನಡೆಸಿದ ರೋಡ್ ಶೋ ವೇಳೆ ಮಾತನಾಡಿದರು.
ಜನರ ಆಶೀರ್ವಾದದಿಂದ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಬಡವರು, ರೈತರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ಕಾರ್ಮಿಕ ವರ್ಗಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದೇನೆ. ಇನ್ನೂ ಅನೇಕ ಕೆಲಸ ಆಗಬೇಕಿದೆ ಎಂದರು.
1983ರಿಂದ ಸಕ್ರಿಯ ರಾಜಕಾರಣದಲ್ಲಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನನಗೆ ಜನರ ನಾಡಿ ಮಿಡಿತ ಗೊತ್ತಿದೆ. ಅಲ್ಲದೆ ನಾವು ನುಡಿದಂತೆ ನಡೆದಿದ್ದೇವೆ ಆದ್ದರಿಂದ ರಾಜ್ಯದಲ್ಲಿ ಸರ್ಕಾರದ ವಿರುದ್ಧದ ಅಲೆ ಇಲ್ಲ ಎಂದ ಅವರು ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು, ಜನರ ಆಶೀರ್ವಾದ ಯಾರ ಮೇಲಿರುತ್ತದೋ ಅವರು ಗೆಲ್ಲುತ್ತಾರೆಯೇ ಹೊರತು ಯಾರಿಂದಲೂ ಯಾರನ್ನೂ ಸೋಲಿಸಲು ಆಗುವುದಿಲ್ಲ ಎಂದರು.
ಹೂಟಗಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿಯ ಅಭಿವೃದ್ಧಿಗೆ 5.5 ಕೋಟಿ ರೂ. ಬಿಡುಗಡೆಯಾಗಿದೆ. ಕೂರ್ಗಳ್ಳಿಯ ಒಳಚರಂಡಿ ಕಾಮಗಾರಿಗೂ ಹಣ ಬಿಡುಗಡೆಯಾಗಿದೆ. ಕಳೆದ 5ವರ್ಷದಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಡಿಯುವ ನೀರು ರಸ್ತೆ, ಸಮುದಾಯ ಭವನಗಳ ನಿರ್ಮಾಣಕ್ಕೆ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ.
2006ರ ಉಪಚುನಾವಣೆಯಲ್ಲಿ ನನಗೆ ರಾಜಕೀಯ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸಿ ಗೆದ್ದು ನಿಮ್ಮ ಋಣ ತೀರಿಸುತ್ತೇನೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ 5ವರ್ಷದ ಸಾಧನೆಗಳನ್ನು ಕ್ಷೇತ್ರಕ್ಕೆ ಮಾಡಿರುವ ಕೆಲಸಗಳನ್ನು ಮನೆ ಮನೆಗೆ ತಿಳಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಹಕರಿಸಿ, ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಎಂ.ಸತ್ಯನಾರಾಯಣ, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಜಿಪಂ ಮಾಜಿ ಅಧ್ಯಕ್ಷರಾದ ಕೂರ್ಗಳ್ಳಿ ಮಹದೇವ್, ಕೆ.ಮರೀಗೌಡ, ಜಿಪಂ ಸದಸ್ಯರಾದ ರಾಕೇಶ್ ಪಾಪಣ್ಣ, ಅರುಣ್ ಕುಮಾರ್, ಕೆಪಿಸಿಸಿ ಸದಸ್ಯ ನರಸೇಗೌಡ, ಬಿ.ಜೆ.ವಿಜಯಕುಮಾರ್, ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಕೃಷ್ಣಮಾದೇಗೌಡ, ತಿಬ್ಬೇಗೌಡ, ಸಿ.ಎನ್. ಮಂಜೇಗೌಡ, ಮಂಜುಳ ಮಾನಸ ಮುಂತಾದವರು ಹಾಜರಿದ್ದರು.