ಬೆಂಗಳೂರು:ಭಯೋತ್ಪಾದಕರು ಹಾಗೂ ಪ್ರತ್ಯೇಕವಾದಿಗಳ ಬಗ್ಗೆ ಮೃದು ದೋರಣೆ ಹೊಂದಿರುವ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಡ್ರಗ್ಸ್ ಹಾಗೂ ಮರಳು ಮಾಫಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಆರೋಪಿಸಿದ್ದಾರೆ.
ಶನಿವಾರ ಮಲ್ಲೇಶ್ವರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪರವಾಗಿಲ್ಲ. ಡ್ರಗ್ಸ್ ಹಾಗೂ ಮರಳು ಮಾಫಿಯಾದ ಪರವಾಗಿದೆ. ಚುನಾವಣೆ ಗೆಲ್ಲಲು ಎಂಐಎಂ, ಪಿಎಫ್ಐ, ಎಸ್‌ಡಿಪಿಐ ಸೇರಿದಂತೆ ಪ್ರತ್ಯೇಕವಾದಿ ಪಕ್ಷಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ದೂರಿದರು.
ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ ಎಂದಾಕ್ಷಣ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಯ ಆರಂಭವಾಗುತ್ತದೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಪಕ್ಷದ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಎಂಐಎಂ ಜತೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಕಾಂಗ್ರೆಸ್ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಸಾರ್ವಜನಿಕವಾಗಿ ಇದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ.ಆಂಧ್ರ ಪ್ರದೇಶದಲ್ಲಿ ಐಎಂಐ ಜತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿರುವುದು ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆಯ ಆರೋಪಿ ವಾಸಿಂ ಪರ ರಾಜ್ಯ ಸರ್ಕಾರವೇ ನಿಂತಿದೆ. ಕೊಲೆಯ ಹಿಂದಿರುವ ಡ್ರಗ್ಸ್ ಮಾಫಿಯಾದ ಬಗ್ಗೆ ಸರ್ಕಾರ ಮಾತಾಡುತ್ತಿಲ್ಲ. ಕರ್ನಾಟಕ ಮಾಫಿಯಾಗಳ ರಾಜ್ಯವಾಗುತ್ತಿರುವುದನ್ನು ಬಿಜೆಪಿ ಸಹಿಸುವುದಿಲ್ಲ. ಪರಿವರ್ತನಾ ಯಾತ್ರೆಯ ಸಮಾರೋಪದ ನಂತರ ರಾಜ್ಯ ಸರ್ಕಾರ ವೈಫಲ್ಯ ಹಾಗೂ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆಯ ಬಗ್ಗೆ ರಾಜ್ಯದ ಪ್ರತಿ ಮನೆಗೂ ತಿಳಿಸಲಿದ್ದೇವೆ ಎಂದರು.